Tuesday, 25 May 2021

ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿಗೆ ಕಾಣದ ವೈರಸ್ ನಡೆಸುತ್ತಿದೆ. ಹಲವಾರು ಸಂಶೋಧನೆಗಳನ್ನು ಮಾಡುತ್ತಾ ಮುಂದುವರಿಯುತ್ತಿದ್ದ ನಮ್ಮ ಮನುಕುಲಕ್ಕೆ ಕೊರೋನಾವೇ ಸವಾಲಾಗಿದೆ. ಇಂತಹ ಕೊರೋನ ಹಲವಾರು ಜನರ ಜೀವವನ್ನು ತೆಗೆದಿದೆ ಮತ್ತೊಮ್ಮೆ ದ್ವಾಪರಯುಗದ ಯುದ್ಧನಂತರದ ಹೆಣಗಳ ರಾಶಿಯನ್ನು ನೆನಪುಮಾಡುವಂತಿದೆ. ಕೆಲವರ ಜೀವನದಲ್ಲಿ ಯಾರೂ ಇಲ್ಲದಂತೆ ಒಂಟಿ ಮಾಡಿದೆ. ಕೆಲವರು ಮನೆಯೊಳಗೇ ಕಿರುಕುಳ ಅನುಭವಿಸುತ್ತಿದ್ದಾರೆ, ಬಾಲ್ಯವಿವಾಹ ಮತ್ತೆ ನಡೆಯುತ್ತಿದೆ. ಸಮಾಜದ ಭೀತಿಯಿಂದ ಸೋಂಕಿತರು ನರಳುತ್ತಿದ್ದಾರೆ, ವೆಚ್ಚಭರಿಸಲಾರದೇ ಸಾಯುತ್ತಿದ್ದಾರೆ. ಈ ರೀತಿ ಇದು ಆವರಿಸಿರುವುದು ದೇಹಮಾತ್ರವಲ್ಲ ಮನಸ್ಸನ್ನು ಕೂಡ ಎಂದು ತಿಳಿಸಿದೆ. ಕೆಲವೆಡೆ ಭಾವನೆಗಳಿಗೆ ಬೆಲೆಯೇ ಇಲ್ಲದಂತೆ ಮಾಡುತ್ತಿದೆ. ಮನುಷ್ಯರ ಮನಸ್ಸುಗಳ ಮಧ್ಯೆ ಬಾಂಧವ್ಯವನ್ನು ಕಸಿಯುತ್ತಿದೆ. ಇನ್ನೂ ಕೆಲವೆಡೆ ಯಾವಾಗಲೂ ಕೆಲಸ, ಓಡಾಟದ ನಡುವೆ ಬ್ಯುಸಿಯಾಗಿದ್ದವರನ್ನು ಒಂದೆಡೆ  ಸೇರಿಸಿ ಒಗ್ಗಟ್ಟನ್ನು ಕೂಡ ಕಲಿಸುತ್ತಿದೆ. ಕೊರೊನ ಜೀವನವನ್ನು ಕಲಿಸುತ್ತಿದೆ,ಹಾಗೇಹೆ ಮೃತ್ಯು ಕೂಪಕ್ಕೂ ತಳ್ಳುತಿದೆ. ಈ ರೀತಿ ಮಹಾಮಾರಿ ನಮ್ಮನ್ನು ಆಡಿಸುತ್ತಿದೆ.  ಮೊದಲ ಅಲೆಗಿಂತಲೂ ಎರಡನೇ ಅಲೆಯಲ್ಲಿ ಹಳ್ಳಿಹಳ್ಳಿಗೂ ಕಾಲಿಟ್ಟ ಕೊರೋನ ಬಂಧುಗಳಂತೆ ಇದ್ದ ಅಕ್ಕಪಕ್ಕದ ಜನರ ನಿಜಮುಖ ದರ್ಶನಮಾಡಿಸಿದೆ.ಹಾಗೆಯೇ ನಿಜವಾದ ಒಳ್ಳೆಯ ಭಾವನೆ ಇರುವ ಮನುಷ್ಯರನ್ನೂ ಕೂಡ ಪರಿಚಯಿಸುತ್ತದೆ. ಗುಂಪು ಗೂಡಿ ಲಗೋರಿ, ಕುಂಟೆಬಿಲ್ಲೆ ಆಡುತ್ತಿದ್ದ ಮಕ್ಕಳು ಇದೀಗ ಕೇವಲ ಒಂದೇ ಜಾಗದಲ್ಲಿ ಕುಳಿತು ಮೊಬೈಲ್ ಎಂಬ ಪ್ರಪಂಚದೊಳಗೆ ಇಳಿದಿದ್ದಾರೆ. ಇನ್ನೂ ಕೆಲವರು ಚಿತ್ರಕಲೆ, ಸಂಗೀತ, ನೃತ್ಯ ಮುಂತಾದವುಗಳಲ್ಲಿ ತೊಡಗಿಸಿಕೊಂಡು ಜಡವಾಗಿರದೆ ಇರಲು ಪ್ರಯತ್ನಿಸುತ್ತಿದ್ದಾರೆ.
ಸ್ನೇಹಿತರೇ, ಹೀಗೆಲ್ಲಾ ಇರುವಾಗ ಕೊರೋನ ಬಂದ ವ್ಯಕ್ತಿಯು ಯಾವ ಕ್ಷಣಕ್ಕೂ ಹೆದರದೆ, ಹಾಗೆಯೇ ಸಾಮಾನ್ಯ ಜ್ವರವೆಂದು ಕೂಡ ತಡೆಗಣಿಸದೇ ಟೆಸ್ಟ್ ಮಾಡಿಸಿ ಅಥವಾ ರೋಗಲಕ್ಷಣಗಳು ಕಂಡು ಬಂದಲ್ಲಿ ದಿನಕ್ಕೆ ನಾಲ್ಕು ಬಾರಿ ಬಿಸಿನೀರಿನ ಹಬೆ, ಲಿಂಬೆ ಹಣ್ಣನ್ನು ನೀರಿಗೆ ಹಿಂಡಿ ಕುಡಿಯುವುದು. ನೆಲನೆಲ್ಲಿ, ತುಳಸಿಯಂತಹ ಔಷಧೀಯ ಸಸ್ಯಗಳ ಕಷಾಯ ಕುಡಿಯುವುದು, ಕಫ ಕಟ್ಟದೇ ಇರುವ ರೀತಿ ಮುನ್ನೆಚ್ಚರಿಕೆ ವಹಿಸುವುದು, ಇಮ್ಯೂನಿಟಿ ಜಾಸ್ತಿ ಮಾಡುವಂತಹ ಹಣ್ಣು, ತರಕಾರಿ , ಸೊಪ್ಪನ್ನು ತಿನ್ನುವುದು. ಪದೇ ಪದೇ ಕೈ ತೊಳೆದುಕೊಳ್ಳುವುದು ಇದರ ಜೊತೆ ಜೊತೆಗೆ ಉತ್ತಮ ಡಾಕ್ಟರ್ ಸಲಹೆ ಪಡೆದು ಔಷಧೀಯನ್ನು ತೆಗೆದುಕೊಳ್ಳುವುದು. ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಆ ವ್ಯಕ್ತಿ ಮನೆಯವರಿಂದ ಸ್ವಲ್ಪ ಅಂತರ ಕಾಯ್ದು ಕೊಳ್ಳುವುದು, ಕೆಮ್ಮುವಾಗ , ಸೀನುವಾಗ ಕರವಸ್ತ್ರ ಬಳಸಿ ನಂತರ ಅದನ್ನು ಚೆನ್ನಾಗಿ ತೊಳೆದು ಹಾಕುವುದು. ಈ ರೀತಿಯಿಂದ ನಾವು ಈ ಕಾಯಿಲೆಯಿಂದ ಸ್ವಲ್ಪ ಸುಧಾರಿಸಬಹುದು.
ಸ್ನೇಹಿತರೇ ನಾವು ಸುರಕ್ಷಿತವಾಗಿ ಅಂತರವನ್ನುಕಾಪಾಡಿಕೊಂಡು ಮಾಸ್ಕನ್ನು ಧರಿಸಿ  ಕಷ್ಟದಲ್ಲಿರುವವರಿಗೆ ಸಹಾಯ ಮಾಡೋಣ.  ಜೀವಾಮೃತ ನೀಡುವ ಡಾಕ್ಟರ್ ನರ್ಸ್ಗ್ ಳು ಹೆದರಿ ರೋಗಿಯ ಕಡೆ ನೋಡಿಲ್ಲ ವೆಂದರೆ ನಮ್ಮಕತೆಏನಾಗುತ್ತಿತ್ತು? ಯಾರು ಸಹಾಯ ಮಾಡದೇ ಇದ್ದರೆ ಹಳ್ಳಿಮನೆಯಲ್ಲಿ ಒಂಟಿ ಇರುವವರ ಕತೆಯೇನು? ಸಹಾಯಮಾಡಲಾಗದಿದ್ದರೂ ಇಲ್ಲ ಸಲ್ಲದ ಮಾತಾಡುವುದನ್ನು ಬಿಟ್ಟು, ಸಾಧ್ಯವಾದರೆ ಕರೆ ಮಾಡಿಯಾದರೂ ಮಾತಾಡಿ ಯೋಗಕ್ಷೇಮ ವಿಚಾರಿಸಿ  ಅವರಿಗೆ ಧೈರ್ಯ ತುಂಬೋಣ. ಸಹಾಯ ಮಾಡುವವರನ್ನು ಗೌರವಿಸೋಣ.                              
ಹೀಗೆಯೇ ಈ ಸಮಯದಲ್ಲೂ ಕೂಡ ಸಾಧಕರು ರೈತರು ತಟಸ್ಥವಾಗಿಲ್ಲ, ಹಾಗೆಯೇ ನಾವೆಲ್ಲರೂ ಈ ಲಾಕ್ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಳ್ಳೋಣ,ಹೊಸತನ್ನು ಕಲಿಯೋಣ.ನಮ್ಮ ಗುರಿಯೆಡೆಗೆ ತಲುಪುವ ತಯಾರಿ ಮಾಡಲು ಅವಕಾಶ ಸಿಕ್ಕಿದೆ ಬಳಸಿಕೊಳ್ಳೋಣ. ಲಾಕ್ಡೌನ್ ಆದರೂ ಕಾಲ ನಿಂತಿಲ್ಲ, ನಮ್ಮಹಸಿವು ನಿಂತಿಲ್ಲ, ಈ ಸಮಯವನ್ನು ಧೈರ್ಯದಿಂದ ಎದುರಿಸೋಣ.ಮನೆಯಲ್ಲಿದ್ದು ನಮ್ಮ ಆರೋಗ್ಯವನ್ನು ಕಾಪಡಿಕೊಳ್ಳೋಣ.   ************************       
#ಅನನ್ಯ ವಿ ಎಂ 
#ವರ್ತೆಗದ್ದೆ

Tuesday, 18 May 2021

ಕರ್ಣನ್ KARNAN ಹೇಗಿದೆ ಗೊತ್ತಾ!!??

ಕರ್ಣನ್ , ಧನುಷ್  ಅಭಿನಯದ ಅದ್ಬುತ ಸಿನಿಮಾ!!.
ಈ ಸಿನಿಮಾದ ಕಂಟೆಂಟ್ ಸರಳವಾದದ್ದು ಆದರೂ ತೆರೆಮೇಲೆ ಹೆಣೆದಿರುವ ರೀತಿ ಅದ್ಭುತ ಅತ್ಯದ್ಭುತ ಅಮೋಘ.. 

ಚಿತ್ರ ಕೊಂಚ ನಿಧಾನವಾಗಿ ವಾಗಿ ಸಾಗ್ತಾ ಇದ್ರು ಸಹ ಸಾಮಾನ್ಯವಾಗಿ ಕೇಲವೊಂದು ಚಿತ್ರಗಳಲ್ಲಿ ಶಾಟ್ ಗಳನ್ನ ನೋಡಿ ಮುಂದೆ ಹೀಗೆ ಆಗಬಹುದು ಎಂದು ಊಹಿಸಬಹುದು ಆದರೆ ಖಂಡಿತ ಇಲ್ಲಿ ಅದು ಸಾಧ್ಯವಿಲ್ಲ  . 

ನಿರ್ದೇಶಕ  ಇಲ್ಲಿ ಯಾವುದೇ ಕಲ್ಪನ (Fantasy) ಯಲ್ಲಿ ಪ್ರೇಕ್ಷಕರನ್ನ ತೇಲಿಸುವ ಪ್ರಯತ್ನವೇ ಮಾಡಿಲ್ಲ ಇಲ್ಲಿ ಎಲ್ಲವೂ ನೈಜತೆಗಳನ್ನ ಒಳಗೊಂಡಿದೆ ಪ್ರತಿಯೊಂದು  ಸಾಮಾನ್ಯ ಜನರ ಜನ ಜೀವನಗಳ ಒಳಗೊಂಡಿದೆ.

ಮೂವಿ ಫ್ರೆಮ್ to ಫ್ರೆಮ್ ಅದ್ಭುತವಾಗಿ ಮೂಡಿ ಬಂದಿದ್ದು.. ಪೊಲೀಸರು ಬಂದಾಗ ಊರಿನವರೆಲ್ಲ ದೊಡ್ಡ ನೀರಿನ ಟ್ಯಾಂಕ್ ಮೇಲೆ ಅಡಗಿ ಕೂತಿರುತ್ತಾರೆ ಎಂದು ಯಾರು ಊಹಿಸಲು ಸಾಧ್ಯವಿಲ್ಲ ಅಷ್ಟು ಅದ್ಭುತವಾಗಿದೆ ಆ ದೃಶ್ಯ.. ಕುದುರೆ  ಓಡಿಸದ ಬಾಲಕ ಊರಿಗಾಗಿ ಕುದುರೆ ಹತ್ತಿ ಹೋಗುವುದು ರೋಮಾಂಚನಕಾರಿ ಆಗಿದೆ.. 

ಮೊದಲಾರ್ಧದಲ್ಲಿ ಕುಂಟುತ್ತಾ ಸಾಗುವ ಕತ್ತೆಯ  ಕಾಲಿನಂತೆ ಮೊದಲಾರ್ಧ ನಿಧಾನವಾಗಿ ಇತ್ತು ಆದ್ರೆ ಖಂಡಿತ ಸಪ್ಪೆ ಆಗಿರಲಿಲ್ಲ.. ಕತ್ತೆಯ ಕಾಲಿನ ಹಗ್ಗ ಕಡಿದ ನಂತರ ಮೂವಿಯ ಓಟ ಕ್ಕೆ ಎಲ್ಲೆಯಿಲ್ಲ.. ನಿಮ್ಮನ್ನ ಪ್ರತಿ ಸೆಕೆಂಡ್ ಹಿಡಿದಿರುಸುತ್ತದೆ. ಅಲ್ಲಲ್ಲಿ ಧನುಷ್ ತೀರಿ ಹೋದ ತಂಗಿಯ Referance ವಿಭಿನ್ನವಾಗಿದೇ.

ಹಳ್ಳಿ ಯ ಜೀವನ , ಹಳ್ಳಿಯ ಅವ್ಯವಸ್ಥೆ ಕೆಟ್ಟ ವ್ಯವಸ್ಥೆಯ ವಿರುದ್ಧ  ಪೊಲೀಸರ ದರ್ಪ  ಎರಡು ಊರಿನ ನಡುವಿನ ವೈಷಮ್ಯ ದ ನಡುವಿನ ಹೋರಾಟವೇ ಈ ಕರ್ಣನ್..

ಒಟ್ಟಾರೆ ಬಿಜಿಎಮ್ ಬೆಂಕಿ.. ಸಿನಿಮಾಟೋಗ್ರಾಫಿ ಚಿಂದಿ. ಪ್ರತಿಯೊಬ್ಬರ ನಟನೆಯು ಅಮೇಜಿಂಗ್.
ಚಿತ್ರ ಅಮೆಜಾನ್ ಪ್ರೈಮ್ ನಲ್ಲಿದ್ದು ಚಿತ್ರ  ಟೈಮ್ ಇದ್ದಾಗ ಬಿಡುವು ಇದ್ದಾಗ ನೋಡಿದ್ರು ಅಥವಾ ನೀವೇ ಬಿಡುವು ಮಾಡಿಕೊಂಡು ಟೈಮ್ ಮಾಡಿಕೊಂಡು ನೋಡಿದ್ರು ಏನು ತೊಂದರೆ ಇಲ್ಲ ಅಂತಹದೊಂದು ಅದ್ಭುತ ಚಿತ ಕರ್ಣನ್..


Monday, 5 April 2021

ದಯವಿಟ್ಟು ಗಮನಿಸಿ !! ರಾಜ್ಯದಲ್ಲಿ ನಾಳೆ ಇಂದ ಮಳೆಯಂತೆ!?

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಸೂಚಿಸಿದ್ದು ಏಪ್ರಿಲ್ 6 ರಿಂದ 10 ರ ವರೆಗೆ ಅಲ್ಲಲ್ಲಿ ಮಳೆಯಾಗಲಿದೆ ಎಂದಿದ್ದಾರೆ.

ಏಪ್ರಿಲ್ 6 ರಂದು ಮೈಸೂರು, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗಲಿದೆ.

ಏಪ್ರಿಲ್ 7 ರಂದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ದಕ್ಷಿಣ ಒಳನಾಡು ಭಾಗದ ಚಾಮರಾಜನಗರ, ಹಾಸನ, ಮೈಸೂರು, ಕೊಡಗು ಭಾಗದಲ್ಲಿ ಮಳೆಯಾಗಲಿದೆ.

ಏಪ್ರಿಲ್ 8 ರಂದು ಕರಾವಳಿ ಹಾಗೂ ಮಲೆನಾಡಿನ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಕೊಡಗು, ಹಾಸನದಲ್ಲಿ ಮಳೆಯಾಗಲಿದೆ.

ಏಪ್ರಿಲ್ 9 ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಕಲಬುರಗಿ, ಬೆಳಗಾವಿ, ಶಿವಮೊಗ್ಗ, ಮೈಸೂರು, ಕೊಡಗು, ರಾಯಚೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗಲಿದೆ.

ಏಪ್ರಿಲ್ 10 ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಲಬುರಗಿ, ರಾಯಚೂರು, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಏಪ್ರಿಲ್ 7 ರವರೆಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಒಣಹವೆ ಇರಲಿದೆ ಎಂದು ಹೇಳಲಾಗಿದೆ.

ಧರೆಗೆ ಮಳೆಯ ಸಿಂಚನದಿಂದ ಬಿಸಿಲ  ಬೆಗೆಯಿಂದ ಕಂಗೆಟ್ಟಿದ್ದ ಜನಕ್ಕೆ ಕೊಂಚ ಕೂಲ್ ಅನುಭವ ಆಗುವುದಂತೂ ಸುಳ್ಳಲ್ಲ.!



Saturday, 3 April 2021

ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ! ಹೀಗಾದ್ರೆ ಐಪಿಎಲ್ ಕಥೆ ಮುಂದೇನು!!??

ಹೌದು ವಿಶ್ವದಲ್ಲೇ ಅತಿ ಶ್ರೀಮಂತಿಕೆಯ ಹಾಗೂ ವರ್ಣರಂಜಿತ ಕ್ರಿಕೆಟ್ ಟೂರ್ನಮೆಂಟ್ ಗಳ ಅಗ್ರಸ್ಥಾನದಲ್ಲಿ ನಮ್ಮೆಲ್ಲರ ತರ್ಕಕ್ಕೆ ಬರುವುದು ಐಪಿಎಲ್, ಇನ್ನೇನು ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಶಾಕ್ ಮೇಲೆ 
ಶಾಕ್!! ಐಪಿಎಲ್ ಗೆ ವಿಘ್ನ ಎದುರಾಗಿದೆ. ಎರಡು ದಿನಗಳ ಹಿಂದಷ್ಟೇ ಕ್ರಿಕೆಟ್ ಗಾಡ್ ಸಚಿನ್ ಕೊರೊನ ಸೋಂಕಿಗೆ ಒಳಗಾಗಿದ್ದ ಸುದ್ದಿ ಕೇಳಿದ್ದೆವು ಇದೀಗ ಡೆಲ್ಲಿ ಕ್ಯಾಪಿಟಲ್ ತಂಡದ ಸಹ ಆಟಗಾರ  ಅಕ್ಷರ್ ಪಟೇಲ್ ಗು ಸೋಂಕು ತಗುಲಿದ್ದು ಆರಂಭದಲ್ಲೇ ವಿಘ್ನ ಎದುರಾಗಿದೆ.
ವಾಂಖೆಡೆ ಸ್ಟೇಡಿಯಂ ನ 16 ಮಂದಿ ಕೆಲಸ ನಿರ್ವಾಹಕರಿಗೂ ಸೋಂಕು ತಗುಲಿದ್ದು ಐಸೋಲೇಶನ್ ನಲ್ಲಿರಿಸಲಾಗಿದೆ, ಈಗ ಕೊರೊನ ಐಪಿಎಲ್ ಮೇಲೆ ದಾಳಿ ಮಾಡುವುದಾಗಿ ಸೂಚನೆ ರವಾನಿಸಿದೆ.
ಚೆನ್ನೈ ತಂಡದಲ್ಲೂ ಕೇಸ್‌!!
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸದಸ್ಯರೊಬ್ಬರಿಗೆ ಕೊರೊನಾ ತಗುಲಿರುವುದು ವರದಿಯಾಗಿದೆ. ಸಿಎಸ್‌ಕೆಯ ತಾಂತ್ರಿಕ ವಿಭಾಗದ ಸದಸ್ಯರೊಬ್ಬರಲ್ಲಿ ಪಾಸಿಟಿವ್‌ ಕಂಡುಬಂದಿದೆ. ಸೋಂಕಿತ ವ್ಯಕ್ತಿ ಯಾವುದೇ ಆಟಗಾರರ ಅಥವಾ ತಂಡ ಸಿಬಂದಿಯ ಸಂಪರ್ಕ ಹೊಂದಿಲ್ಲ ಎಂದು ಸಿಎಸ್‌ಕೆ ಪ್ರಾಂಚೈಸಿ ಖಾತ್ರಿಪಡಿಸಿದೆ.

ಮತ್ತೆ ದೇಶಾದ್ಯಂತ ಕೊರೊನ 2ನೆ ಅಲೆ ಸ್ಫೋಟಗೊಂಡಿದ್ದು ದೇಶದ ಜನರಲ್ಲಿ ಮತ್ತು ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.

ಅಪ್ಪು ಫ್ಯಾನ್ಸ್ ಆತಂಕ!! ಯುವರತ್ನ!! ಕೋರೊನ!! ಸರ್ಕಾರ!???

ಏಪ್ರಿಲ್ ಒಂದರಂದು ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿನಯದ ಯುವರತ್ನ ತೆರೆಕಂಡಿದ್ದು, ಎಲ್ಲೆಡೆ ಅತೀ ಉತ್ತಮ ಪ್ರತಿಕ್ರಿಯೆ ಪಡೆದಿದ್ದು ಕೊರೊನ ಕಾರಣದದಿಂದ ಕೊಂಚ ಹಿನ್ನಡೆ ಅನುಭವಿಸಿದ್ದ ಚಿತ್ರೋದ್ಯಮ ಈಗ  ಕೊಂಚ ವೇಗ ಕಂಡುಕೊಂಡ ಸಮಯದಲ್ಲೇ ಮತ್ತೆ ರಾಜ್ಯದಲ್ಲಿ ಕೊರೊನಾರ್ಭಟ ಹೆಚ್ಚಾದ ಕಾರಣ ನಿನ್ನೆ ಸರ್ಕಾರ ಮತ್ತೆ ಚಿತ್ರಮಂದಿರದ ಸೀಟುಗಳ ಭರ್ತಿ ಕೇವಲ 50 ಪ್ರತಿಶತಕ್ಕೆ ಇಳಿಸಾಲಾಗಿತ್ತು.  ಎಲ್ಲೆಡೆ ಅಸಮಾಧಾನ ಹೊರ ಹಾಕಿದ್ದರು. ಶಿವರಾಜ್ ಕುಮಾರ್ ಮತ್ತು ನಾಗತಿಹಳ್ಳಿ ಚಂದ್ರ ಶೇಖರ್ ಸರ್ಕಾರದ ನಿರ್ಧಾರವನ್ನು ಟ್ವಿಟರ್ ನಲ್ಲಿ  ವಣಿಜ್ಯ ಮಂಡಳಿಯ ಮನವಿಯನ್ನು ಸ್ವೀಕರಿಸಿರುವ ಸರ್ಕಾರ ಏಪ್ರಿಲ್ 7 ರ ವರೆಗೆ ನಿರ್ಬಂಧ ಸಡಿಲಿಕೆ ಮಾಡಿದೆ. ಈ ಮೂಲಕ ಮೂರು ದಿನಗಳ ಕಾಲ ನಿರ್ಬಂಧ ಸಡಿಲಿಕೆ ಮಾಡಿರುವ ಸರ್ಕಾರ, ಏಪ್ರಿಲ್ 6 ರ ಮಧ್ಯರಾತ್ರಿವರೆಗೆ ನಿರ್ಬಂಧ ಸಡಿಲಿಕೆ ಮಾಡಿದೆ. 
ಸದ್ಯ ಸರ್ಕಾರದ ಈ ನಿರ್ಧಾರದಿಂದ ಅಪ್ಪು ಅಭಿಮಾನಿಗಳು ಹಾಗೂ ಚಿತ್ರಪ್ರೇಮಿಗಳು ಕೊಂಚ ನಿರಾಳರಾಗಿದ್ದಾರೆ.

Friday, 2 April 2021

ಕನ್ನಡಿಗರ ಹೃದಯ ಗೆದ್ದ ಅಪ್ಪು! ಶೇಕಡ 99 ರಷ್ಟು ಸ್ವಚ್ಛ ಸಿನಿಮಾ : ಯುವರತ್ನ!!

ಏಪ್ರಿಲ್ 1 ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಿರುವ ಸಂತೋಷ್ ಆನಂದ್ ರಾಮ್ ನಿರ್ದೇಶನದ ಪುನೀತ್  ರಾಜ್ ಕುಮಾರ್  ಪ್ರಕಾಶ್ ರೈ ಅಚ್ಯುತ್ ಕುಮಾರ್ ಪ್ರಕಾಶ್ ಬೆಳವಾಡಿ ಸಯೇಶ ಕಲಾವಿದರ ದಂಡೇ ಅಭಿನಯಿಸಿರುವಂತ ಯುವರತ್ನ ಚಿತ್ರ  ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಮತ್ತೊಮ್ಮೆ ಪುನೀತ್ ರ ಖಾತೆ ಇಂಡಸ್ಟ್ರಿ ಹಿಟ್ ಸೇರುವುದು ಖಚಿತ. 

ಒಂದೊಳ್ಳೆ ಸಂದೇಶ ಹೊತ್ತು ತಂದಿರುವ ಈ ಚಿತ್ರ ವಿದ್ಯಾರ್ಥಿ ಜೀವನದಲ್ಲಿ ಓದಿನ ಜೊತೆಗೆ  ಕಲೆ ಸಾಹಿತ್ಯ ಕ್ರೀಡೆಗಳು ಜೀವನ ರೂಪಿಸುತ್ತವೆ ವಿದ್ಯಾರ್ಥಿಗಳ ಆಸಕ್ತಿಗೆ ಬೆಂಬಲ ಕೊಡಬೇಕು ಅನ್ನುವುದರ ಜೊತೆಗೆ  ಹೇಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನ ವ್ಯಾಪಾರಿಕರಣ ಗೊಳಿಸಿವೆ ಎನ್ನುವುದನ್ನ ತೋರಿಸುತ್ತ  ವಿದ್ಯಾರ್ಥಿಗಳು ಹೇಗೆ drugs ಗೆ ಅಡಿಕ್ಟ್ ಆಗ್ತಾ ಇದಾರೆ ಎನ್ನುವುದನ್ನ ಎಳೆ ಎಳೆಯಾಗಿ ಹೇಳ್ತಾ ಗುರುವಿನ ಮಹತ್ವ ತಿಳಿಸುತ್ತಾ ಹೋಗುತ್ತದೇ.

ಹೀರೊ ಸರ್ಕಾರಿ ಕಾಲೇಜನ್ನ ಉಳಿಸುವ ಸಲುವಾಗಿ ಹೇಗೆ ವ್ಯವಸ್ಥೆಯ ವಿರುದ್ದ ಹೊರಡುತ್ತಾನೆ ಎನ್ನುವುದೇ ಒಂದೆಳೆ ಕಥೆ ಹಾಗೆ ಇಲ್ಲಿ ಪುನೀತ್ ಜೊತೆಗೆ ಮತ್ತೊಬ್ಬ ಹೀರೊ ಇದ್ದು ಅವರೇ ಪ್ರಕಾಶ್ ರಾಜ್ ತಮ್ಮ ಅಮೋಘ ಅಭಿನಯದಿಂದ ಎಲ್ಲರ ಮನಸ್ಸು ಗೆಲ್ಲುವುದರಲ್ಲಿ ಸಂಶಯವಿಲ್ಲ. ಹೀರೋಯಿನ್ ಸಯೇಶ ಪಾತ್ರ ಚೆನ್ನಾಗಿದ್ದು ಅಂತಹದ್ದೇನು ಮಹತ್ವತೆ ಪಾತ್ರಕಿಲ್ಲ..ತಮನ್ ಉತ್ತಮ ಸಂಗೀತ ನೀಡಿದ್ದು ಚಿತ್ರದ್ದುದ್ದಕ್ಕೂ ಪ್ರೇಕ್ಷಕರರನ್ನ ಹಿಡಿದು ಕೂರಿಸುತ್ತದೆ . ಅಲ್ಲಲ್ಲಿ ಶಿವಾರಾಜ್ ಕುಮಾರ್ ರೆಫರ್ನ್ಸ್ ರಾಜಕುಮಾರ್ ರೆಫರೆನ್ಸ್ ಇರೋ ಡೈಲಾಗ್ ಗಳು  ಶಿಳ್ಳೆ ಗಿಟ್ಟಿಸಿಕೊಳ್ಳುತ್ತವೆ. 

ನೀವೊಬ್ಬರು 
 ಉತ್ತಮ ಸಂದೇಶವುಳ್ಳ ಕುಟುಂಬ ಸಮೇತರಾಗಿ ನೋಡಬಹುದಂತಹ ಯಾವುದೇ ನಾನ್ ವೆಜ್ ಜೋಕ್ ಗಳು ಇಲ್ಲದಂತ ಫ್ಯಾಮಿಲಿ ಪ್ಯಾಕೇಜ್ ಸಿನಿಮಾದ ಪ್ರೇಮಿಗಳಾಗಿದ್ದರೆ ಇನ್ನೇಕೆ ತಡ  .....



#Sanketha Gm Thirthahalli

Wednesday, 6 January 2021

ಮಲೆನಾಡಿಗೆ ಅಕೇಶಿಯಾ ಬೇಡ

ನಮ್ಮೂರ ಕಾಡುಗಳ ಈಗಾಗಲೇ ಆಕ್ರಮಿಸಿದ್ದಾಗಿದೆ ಈ ಅಕೇಶಿಯಾ , ಮಲೆನಾಡೆಂದರೆ ಅರಣ್ಯ , ಜೀವ ವೈವಿಧ್ಯತೆ , ಸಂಸ್ಕೃತಿ ಅಪಾರ ನೈಸರ್ಗಿಕ ಸಂಪತ್ತಿನ ಕಣಜ.
ನೆಲದಿಂದ ಹಿಡಿದು ಎತ್ತರದ ಮರಗಳವರೆಗೂವೈವಿಧ್ಯಮಯವಾದ ಗಿಡಮೂಲಿಕೆಗಳಂತಹ ಸಂಪತ್ತು ಈ ಮಣ್ಣಿನಲ್ಲಿ ಅಡಗಿದೆ ಅಕೇಶಿಯಾದಂತಹ ಈ ಸಸ್ಯ ಪ್ರಭೇಧಗಳು ಬೆಳೆಸುವುದರಿಂದ ಪರಿಸರದ ಮೇಲೆ ಹಾನಿಯುಂಟಾಗುತ್ತಿದೆ. ಕೇವಲ ಮೂರು ದಶಕಗಳಲ್ಲೇ ಹೀನಾಯ ಮಟ್ಟದಲ್ಲಿ ಅಂತರ್ಜಲ ತಗ್ಗಿಸಿರುವ ಈ ಸಸ್ಯಗಳು ಬೆಂಗಳೂರಿನಂತೆಯೇ ಮಲೆನಾಡಿಗೂ ಪೈಪ್ ಲೈನ್ ನಲ್ಲಿ ನೀರು ಬರುವಂತೆ ಮಾಡುವುದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ. ಅಕೇಶಿಯಾ ಮೂಲತಃ ಆಸ್ಟ್ರೇಲಿಯಾ ಇಂಡೋನೇಷಿಯಾದ ಗಿಡ ಈ ಅಕೇಶಿಯ ಪ್ಲಾಂಟೇಶನ್ ಗಳಲ್ಲಿ ಹುಲ್ಲು ಸಹ ಬೆಳೆಯುವುದಿಲ್ಲ ಹಕ್ಕಿ ಗೂಡುಕಟ್ಟುವುದಿಲ್ಲ ಇದು ನಮ್ಮ ಕಾಡಿಗೆ ಜೀವ ಸಂಕುಲಗಳಿಗೆ ಪೆಟ್ಟು ನೀಡುತ್ತಿದೆ. ಈ ಅಕೇಶಿಯಾ ಬೇರುಗಳು ಭೂಮಿಯ ಮೇಲ್ಪದರದಲ್ಲೇ ಹರಡುವುದರಿಂದ ಮಣ್ಣಿನ ಫಲವತ್ತತೆ ಮತ್ತು ಅಂತರ್ಜಲ ಕೆಳಮಟ್ಟ ತಲುಪಲು ಬಿಡದೆ ಭೂಮಿಯನ್ನು ಬರಡುಮಾಡುತ್ತಿವೆ. ಸಸ್ಯಕಾಶಿ ಮಲೆನಾಡು ಬಯಲುಸೀಮೆ ಆಗುವಮುನ್ನ ಅಕೇಶಿಯ ಹೊರದಬ್ಬಲು ಪ್ರಯತ್ನಿಸಬೇಕಿದೆ.

Wednesday, 21 August 2019

ಆರಗ ಜ್ಞಾನೇಂದ್ರ , ನಿಮ್ಮ ನಂಬಿ ವೋಟ್ ಹಾಕಿದ್ದ ನಮಗೆ ಮೋಸ ಮಾಡಿ ಬಿಟ್ಟಿರಲ್ಲ.
ಈ ಬಾರಿ ನೀವು ಮಂತ್ರಿ ಆಗಿಯೇ ಆಗುತ್ತಿರಿ ಪಕ್ಷದಲ್ಲಿ ಅಷ್ಟು ಪ್ರಬಲರು  ಎಂದು ಕೊ0ಡಿದ್ದೇವಲ್ಲ ,.. ನಿಮ್ಮನ್ನ ನಂಬಿ ನಾವು ಕೆಟ್ಟೆವಲ್ಲ..
 ನೀವು ಈ ಎಲ್ಲ ನಡುವಳಿಕೆ ಮಾಡಬೇಕಿತ್ತು ಆಗ ನಿಮಗೆ ಪಕ್ಷದಲ್ಲಿ ಸಚಿವ ಸ್ಥಾನ ಸಿಗುತ್ತಿತ್ತು..
ಇಲ್ಲ ಸಲ್ಲದನ್ನು ಮೈ ಮೇಲೆ ಹಾಕಿಕೊಂಡು ದಿನಕ್ಕೊಂದು ಬುಕಾಳಿ ಕಾಮೆಂಟ್ tv ಮುಂದೆ ಹೊಡಿಯಬೇಕಿತ್ತು..
ಯಾವಾಗಲೂ ರೆಬೆಲ್ ಅತೃಪ್ತರಾಗಿದ್ದಂತೆ ತೋರಿಸಿ ಕೊಳ್ಳ ಬೇಕಿತ್ತು..
ಭ್ರಷ್ಟಾಚಾರ ಮನೆ ಮರುಕು ತಲೆ  ಹಿಡುಕ ಕೆಲಸಗಳನ್ನ ಮಾಡಿ ಸದಾ ಮಾಧ್ಯಮಗಳಲ್ಲಿ ದಿನ ಕಾಣಿಸಿಕೊಳ್ಳ ಬೇಕಿತ್ತು.
ಒಂದೇ ಪಕ್ಷಕ್ಕಾಗಿ ಸುಮಾರು 45 ವರ್ಷಗಳ ಕಾಲ ಜೀತದಾಳುವಿನಂತೆ ದುಡಿದಿದ್ದರಲ್ಲ ಅದು ನಿಮ್ಮ ಮೂರ್ಖತನ ದಿನಕ್ಕೊಂದು ಪಕ್ಷ ಲಾಭಕ್ಕಾಗಿ ಹವಣಿಸ ಬೇಕಿತ್ತು..
ಹಗರಣಗಳಲ್ಲಿ ನಿಮ್ಮದು ಒಂದು ಸಿಂಹ ಪಾಲು ಯಾವಾಗ್ಲೂ ಇರಬೇಕಿತ್ತು..
ದೊಡ್ಡ ದೊಡ್ಡ (ನಿಮ್ಮ ಮುಂದೆ ಬಚ್ಚಗಳು ಹಗರಣ ಹಾಳು ಮೂಳು ಮಾಡಿ ಬೇವರ್ಸಿ ಮಾಧ್ಯಮಗಳಿಂದ ದೊಡ್ಡವರಾದವರು) ಅವರುಗಳ ಬಳಿ ಹಿಂದೆ ಮುಂದೆ ದಿನ ಪ್ರತಿ ಕ್ಷೇತ್ರ ಬಿಟ್ಟು ಓಡಾಡಲು ನಿಮಗೆ ಆಗಲಿಲ್ಲ..ಬಕೆಟ್ ರಾಜಕಾರಣ ಮಾಡಲು ನಿಮಗೆ ಬರಲಿಲ್ಲ.
ಕೋಟಿ ಒಡೆಯರು ಕೋಟಿ ಕಾರುಗಳನ್ನು ಇಟ್ಟು ಶೋಕಿ ಮಾಡಲು ನಿಮಗೆ ಆಗಲಿಲ್ಲ.. ಕುಟುಂಬ ರಾಜಕಾರಣ ಮಾಡಿ  ಸಂಖ್ಯಾ ಬಲ ನನ್ನದು ಇಷ್ಟಿದೆ ಎಂದು ಹೇಳಿಕೊಳ್ಳುವವರು ನಿವಲ್ಲ..
ರೇಬಲ್ ಅಲ್ಲ , ಮೋಸ ಹೊಂಚುಗಾರನಲ್ಲ ,  ಉಂಡ ಮನೆಗೆ ಯಡಿಯೂರಪ್ಪ ನಂತೆ 2 ಬಗೆದವರಲ್ಲ .. ಇಂತ ಎಲ್ಲ ಗುಣಗಳು ಇಲ್ಲದಿದ್ದ ಮೇಲೆ ನಿಮ್ಮನ್ನು ನಂಬಿ ಮತ ನೀಡಿದ್ದೇವಲ್ಲ ಈ ಬಾರಿ ಮಂತ್ರಿ ಆಗುತ್ತಿರಿ ಎಂದು  ನೀವು ಮೋಸ ಮಾಡಿ ಬಿಟ್ಟಿರಿ ಇನ್ನು ಮುಂದೆ ಈ ಮೇಲಿನ ಗುಣಗಳ ನಿಮ್ಮದಾಗಿರಿಸಿ ಕೊಳ್ಳಿ ಖಂಡಿತ ಸಚಿವ ರಾಗುವಿರಿ..
           - RIGHT WING KANNADA

Tuesday, 20 August 2019

ಭತ್ತದ ಬದುಕು ಸಾದ್ಯವಿಲ್ಲ












      ಮಳೆಗಾಲದಲ್ಲಿ ಯಾವಾಗ ಅಂಗಡಿ ಕಟ್ಟೆಗಳು ಖಾಲಿ ಆಗಿ ಜನರಿಲ್ಲದೆ ನಿಶ್ಶಬ್ದವಾಗಿರುತ್ತದೆಯೋ ಅದರರ್ಥ ಮಲೆನಾಡಿನಲ್ಲಿ ಜನ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು.. 
ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರ ಜೀವನ ಸ್ವಲ್ಪ ಸಮಯದ ಹಿಂದೆ ಉತ್ತಮವಾಗಿತ್ತು ಆದ್ರೆ ಈಗ ಅವರ ಪರಿಸ್ಥಿತಿಯು ಹದಗೆಟ್ಟಿದೆ ಆದ್ರೆ ಭತ್ತ ಬೆಳೆಯುವವರಿಗಿಂತ ಏನು ಹದಗೆಟ್ಟಿಲ್ಲ. ನಾವೆಲ್ಲ ನೋಡಿದ್ದೇವೆ  ರಸ್ತೆ ಬದಿಯ ಗದ್ದೆಗಳು ನಿವೇಶಗಳು ಶಾಪಿಂಗ್ ಮಾಲ್ ಗಳು ಆದ್ರೆ  , ಇನ್ನು  ಮಕ್ಕಿ ಗದ್ದೆಗಳು  ತೋಟಗಳು , ನೀಲಗಿರಿ ಅಕೇಶಿಯ ಪ್ಲಾಂಟೇಶನ್ ಗಳಾಗಿ ಬದಲಾಗುತ್ತಿವೆ.ಹಾಗದರೆ  ಭತ್ತ ಬೆಳೆಯುವವರು ಹಿಂದೇಟು ಹಾಕಲು ಗದ್ದೆಗಳನ್ನ ಹಾಳು ಬಿಡಲು ಕಾರಣವನ್ನು ಹುಡುಕುತ್ತ ಹೊರಟರೆ ಸಿಗುವ ಕಾರಣಗಳು ಹಲಾವಾರು ಆದರೆ ಅವೆಲ್ಲ ಕಾರಣಗಳಲ್ಲಿ  ಉಳಿದಿರುವ  ಒಂದೇ ಸತ್ಯ ಲಾಭವೇ ಇಲ್ಲ  , ಮೂರು ಹೊತ್ತು ಉಣ್ಣಲು ಭತ್ತ ಮನೆಯ ಕಣಜದಲ್ಲಿ ಇರುತ್ತದೆ ಹೊರತು ಬೇರೇನೂ ಲಾಭವೂ ಇಲ್ಲ..
ಭತ್ತ ಬೆಳೆಯುವ ರೈತರು ಇಂದು ಶ್ರೀಮಂತರಾಗಿ ಉಳಿದಿಲ್ಲ , ಇಂದು ಭತ್ತ ಬೆಳೆಯುವ ರೈತರು ಅದರಲ್ಲೂ ಮಲೆನಾಡಿನ ಭಾಗದಲ್ಲಿ ಬಡವರು ಮಾತ್ರ, ಯಾರಿಗೆ ಹೊಳೆಯಿಂದ ನೀರು ತರುವ ಶಕ್ತಿಇಲ್ಲವೋ , ಯಾರಿಗೆ ಬೋರ್ವೆಲ್ ಹೊಡೆಸಿ ನೀರು ತಂದು ತೋಟ ಮಾಡುವ ಶಕ್ತಿ ಇಲ್ಲವೋ  ಇಂತವರು ಇನ್ನು  ಗದ್ದೆಯನ್ನು ಇಟ್ಟುಕೊಂಡಿದ್ದರೋ ಹೊರತು ,  ಆರ್ಥಿಕವಾಗಿ ಸದೃಢ ಇದ್ದವರು ಕಾಡು ಗದ್ದೆ ಸಾಯಲಿ ಕಾಡು ಗುಡ್ಡವನ್ನು ಒಳ ಹಾಕಿ  ತೋಟ ಮಾಡಿದ್ದಾರೆ. ಭತ್ತ ಬೆಳೆಯುವವರ  ಪರಿಸ್ಥಿತಿ ಎಷ್ಟು ಹೀನಾಯವಾಗಿದೆ ಎಂದರೆ  ನಾನು ಹೇಳುವ ಬದಲು ನೀವೇ ಮುಂದೆ ಈ ಲೇಖನ ಓದಿದರೆ ಮನಸಲ್ಲಿ ಹೀಗೊಂದು ಯೋಚನೆ ಬರದೆ ಇರದು ಕೂಲಿ ಮಾಡಿದರೆ ಉತ್ತಮ ಜೀವನವಿದೆ ಎಂದು.

     ನೀವು ಯೋಚಿಸಿರ ಬಹುದು ಬರೀ ಕಷ್ಟ ಕಷ್ಟ ಎಂತಾ ಹೇಳುತ್ತಲೇ ಹೋಗುತ್ತಿದ್ದಾನೆ ಈ ಲೇಖಕ  ಹಾಗಾದ್ರೆ ಏನು ಕಷ್ಟಗಳೆಂದು ಅದಕ್ಕಾಗಿ ಸಣ್ಣ ಲೆಕ್ಕಾಚಾರ ನಿಮ್ಮ ಮುಂದೆ .

  ಮೂರು ಏಕರ್ರೆ ಗದ್ದೆಗೆ (ಕೆಲಸಕ್ಕೆ ಬಂದವರ ಊಟ ತಿಂಡಿಗಳನ್ನು ಇನ್ನಿತರ ಸಣ್ಣ ಪುಟ್ಟ ಖರ್ಚುಗಳನ್ನು ಬಿಟ್ಟು)

ಗದ್ದೆ ಹೊಳ್ಕೆ ಗೆ  ಟ್ರಾಕ್ಟರ್ಗೆ - 3000 ಸಾವಿರ.
ಸಸಿ ಹಾಕಲು ಆಳು ಮತ್ತು ಹೂಟಿಗೆ - 2500 ರೂಪಾಯಿಗಳು.
ಅಂಚು ಕಡಿಯಲು ಕನಿಷ್ಠ 5 ಆಳಿಗೆ  - 2500ರೂಪಾಯಿಗಳು
ಗದ್ದೆ ನೆಟ್ಟಿಗೆ ಆಳಿಗೆ- 2700ಪ್ರತಿ ಎಕರೆಗೆ *3 ಎಕರೆ = 7100ರೂಪಾಯಿಗಳು
ಗದ್ದೆ ಹೂಟಿ = ಪ್ರತಿ ಗಂಟೆಗೆ 650 *ಕನಿಷ್ಠ ಘಂಟೆಗೆ = 5200
ಗದ್ದೆಗೆ ಗೊಬ್ಬರ = 3 ಮೂಟೆ = 1300*3 = 3900
ಗದ್ದೆಗೆ ಔಷಧಿ = 1000
ಗದ್ದೆ ಕಳೆ ತಗಿಯಲು = 5 ಆಳು ನಾವೇ ಕೆಲ್ಸ ಮಾಡಿದ್ರು ಬೆಲೆ ಉಂಟಾಲ್ಲ ಶ್ರಮಕ್ಕೆ = 250*5= 1250
ಗದ್ದೆ ಕೊಯ್ಲು = 20 ಆಳು * 350=7000
ಗದ್ದೆ ಹೊರೆ = 14 ಆಳು *350=  4900
ಒಕ್ಕಲಾಟ = 8000
ಕೆಲ್ಸದವ್ರಿಗೆ ಊಟ ಎಲ್ಲ ಬಿಟ್ಟು ಖರ್ಚು 43850
ಭತ್ತ ಮಾರಿದಾಗ ಸಿಗುವುದು 
25 quintal * 1200 = 32500
ಹುಲ್ಲು ಮಾರಿದ್ರೆ ಒಂದು 15000
ಒಟ್ಟು 47500
-         43850
ಒಟ್ಟು  ಲಾಭ .3650 .  ಸಾಕ ಒಬ್ಬ ಜೀವನ ನಡೆಸೋದಕ್ಕೆ ಸಾದ್ಯವ ಈ ಗದ್ದೆ ನಂಬಿ ಮಲೆನಾಡಿನಲ್ಲಿ..  ..
3650 ಅಂದ್ರೆ ದಿನಕ್ಕೆ  10 ರೂಪಾಯಿ.. ಬದುಕೊಕೇ ಆಗುತ್ತಾ.. (ಗದ್ದೆಗೆ ಒಡ್ಡು ಬೇಲಿ ಮಾಡಿದೆಲ್ಲವನ್ನು ಬಿಟ್ಟು )
      ಗದ್ದೆ ಭತ್ತದ ಕೃಷಿ ಮಾಡಿ ಸದೃಢ ಜೀವನ ಮಾಡಲಿಕ್ಕಂತೂ ಸಾಧ್ಯವಿಲ್ಲ.. ದಿನಕ್ಕೆ ಹತ್ತು ರೂಪಾಯಿ ಅಂದ್ರೆ ಭಿಕ್ಷುಕನಿಗಿಂತಲು ಸಣ್ಣ ಮಟ್ಟದ ಜೀವನ.. ಆದ್ದರಿಂದಲೇ ಇಂದು  ಸಾಕಷ್ಟು ಭತ್ತ ಬೆಳೆಗಾರರು ಕೂಲಿಯನ್ನ ಅವಲಂಬಿಸಿದ್ದಾರೆ.. ಇಲ್ಲ ಅಂದ್ರೆ ಹೇಗೆ ಬದುಕಬೇಕು ಹೇಳಿ ವಿದ್ಯಾಭ್ಯಾಸ , ಸಂತೆ ಸಾಮಾನು ಇನ್ನು ಹಲವಾರಕ್ಕೆ ಕೂಲಿಯೇ ಆಧಾರ..  
      ಪ್ರಸ್ತಕ ಈ ಭಾರಿಯಂತೂ ಜನ ತಲೆಯೇತ್ತುವ ಪರಿಸ್ಥಿತಿಯಲ್ಲಿಯೇ ಇಲ್ಲ ನೆರೆ ಬಂದು ನೆಟ್ಟಿದ್ದ ಗದ್ದೆಗಳು  ನೆಲ ಕಚ್ಚಿವೆ , ಕೆಲವರು ಈ ವರ್ಷದ ಫಸಲಿನ ಆಸೆಯೇ ಬಿಟ್ಟರೆ ಇನ್ನೂ ಹಲವಾರು ಹಲವಾರು ಕಡೆ ಸಸಿ ಹುಡುಕಿ ಮತ್ತೆ ನಟ್ಟಿ ಮಾಡಲು ಶುರು ಮಾಡಿದ್ದಾರೆ. ಹೀಗಿರುವಾಗ ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಬಡವರಿಗೆ ಸ್ವಲ್ಪ ಸಹಾಯವಾಗ ಬಹುದು , ಬಂದ ಪರಿಹಾರವು ನೂರ ಎಂಟು ಗಿಡುಗ ಹದ್ದು ಗಳು ನುಂಗಿ ಎಕರೆ ಇನ್ನೂರು ಮುನ್ನೂರು ಕೊಡುವ ಬದಲು ಹಾಗೆ ಇದ್ದರೆ ಒಳ್ಳೆಯದು  ಎನ್ನುವುದು ನನ್ನ ಭಾವನೆ.  ನಮ್ಮ ಜನರು ಅದರಲ್ಲೂ ಭತ್ತ ನಂಬಿ ಬದುಕುವವರು ಬಡವರು  ಭತ್ತ ಬೆಳೆದು ಬದುಕೊಕೇ ಸಾಧ್ಯವಿಲ್ಲ ತೋಟ ಮಾಡಲು ಹಣವಿಲ್ಲ ಭತ್ತ ಬೆಳೆಯುವವರು ಬಡವರು..
         - ಸಂಕೇತ ಜಿ ಎಂ ತೀರ್ಥಹಳ್ಳಿ









Wednesday, 15 May 2019

ಮಲೆನಾಡು ಅಂದರೆ ಒಮ್ಮೆಲೇ ಕಣ್ಣು ಮುಂದೆ ಕಂಪಿಸೋದು    ಮಳೆ  ಹಸಿರಿನ ದಟ್ಟ ಕಾಡುಗಳು ವಿಪರೀತವಾದಂತಹ ಮಳೆ ಅಷ್ಟೇನಾ ಮಲೆನಾಡು ಅಲ್ಲವೇ ಅಲ್ಲ ವಿವಿಧ ಸಂಸ್ಕೃತಿ  ಆಚರಣೆಗಳು ಹೊಸ್ತಿನ ಮನೆ ,ದಯ್ದರ್ಕ್ಕೆ . ಮಾಲಾಯ, ಇಂತಹ ಎಷ್ಟೋ ಆಚರಣೆಗಳು ಸಹ ಇವೆ.ಹೇಳಿದ್ದೆ ಎಷ್ಟು ಬಾರಿ ಹೇಳೋದು ಮಾದ್ಯಮಗಳಂತೂ ಮಲೆನಾಡನ್ನು ಶಾಂತವೇರಿ ಗೋಪಾಲಗೌಡರ ಸಮಾಜವಾದಿ ನೆಲವೆಂದು ಬಣ್ಣಿಸುವರು. ಇಂತಹ ಮಲೆನಾಡಲ್ಲಿ ಇಂದು ಭತ್ತದ ಗದ್ದೆಗಳೆಲ್ಲ ದುರ್ಭಿನು ಹಾಕಿ ಹುಡುಕುವ ಹಂತಕ್ಕೆ ಬಂದು ತಲುಪಿವೆ. ರಸ್ತೆಗಳಿಗೆ ಹತ್ತಿರವಾಗಿ ಇದ್ದ ಗದ್ದೆಗಳು layout ಗಳಾಗಿ ನಿವೇಷನಗಳಾಗಿ ಬದಲಾವಣೆಯಾಗಿ ವಾಣಿಜ್ಯ ಉದ್ದೇಶಗಳಿಗೆ  ಮಾರ್ಪಾಡದರೆ, ಗದ್ದೆಗಳು ನೀಲಗಿರಿ , ಅಕೇಶಿಯ, ಅಡಿಕೆ ತೋಟಗಳಾಗಿ ರೂಪುಗೊಂಡಿವೆ.ಇನ್ನೂ ಉಳಿದ ಗದ್ದೆಗಳಲ್ಲಿ ಭತ್ತ ನಾಟಿ ಇದ್ದರು ಹಿಂದಿದ್ದ ಕಳೆ ಖುಷಿ ಇಲ್ಲ, ಗಾಜನೂರು ಆಳುಗಳೊ , ಇನ್ನಿತರ ನವನವೀನ ಯಂತ್ರೋಪಕರಣಗಳ ಸಹಾಯದಿಂದ ಒಂದೋ ಎರಡೋ ದಿನಕ್ಕೆ  ಗದ್ದೆ ನಟ್ಟಿ ಮುಗಿದು ಜನ ಮನೆ ಸೇರುತ್ತಾರೆ. 
       ಆದ್ರೆ ಮೊದಲು ಹೀಗಿರಲಿಲ್ಲ ,  ಗದ್ದೆ ನಟ್ಟಿಯ ಮೊದಲ ಹಂತ   ಶುರು ಆಗ್ತಿದ್ದಿದ್ದು ಜೂನ್ ಶುರುವಿನಲ್ಲಿ ಮೊದಲ ಮುಂಗಾರು ಸಿಂಚನವಾದಗ ಗದ್ದೆ ಹೊಳ್ಕೆ  ಶುರು ಆಗುತಿತ್ತು( ಹೋಳ್ಕೆ ಮೊದಲ ಹಂತದ ಉಳುಮೆ) ಮಾಡಿ  ಸಸಿ ಹಾಕಲು ರೆಡಿ ಆಗುತ್ತಿದ್ದರು , ಜೂನ್ ಹದಿನೈದು ಹದಿನಾರಕ್ಕೆ ಗದ್ದೆಯಲ್ಲಿ ನೀರಾಗಿ ಸಸಿ ಹಾಕಲು  ಯೋಗ್ಯವಾಗಿರುವಂತೆ ಭೂಮಿ ಮಾರ್ಪಾಡಗಿರುತ್ತಿತ್ತು. ಇಂತಹ ಸಂದರ್ಭದಲ್ಲಿ ಮಲೆನಾಡಿನ ರೈತರು ಮೈಯಳಿಗೆ  ಕೆಲಸಕ್ಕೆ ಹೋಗುವುದರ ಮೂಲಕ ಗದ್ದೆ ನಾಟಿಯ ಕೆಲಸವನ್ನು ಆರಂಭಿಸುತ್ತಿದ್ದರು.. ಮೊದಲು ಹಳ್ಳದಲ್ಲಿ ಗೋಣಿಚೀಲದಲ್ಲಿ  ಒಳ್ಳೆಯ ಐಟಿ , ಜೋಳಗ , ಹೆಗ್ಗೆ  ಮೊಳಕೆಯ ಭತ್ತಗಳನ್ನು  ಕಟ್ಟಿ ಹಳ್ಳದಲ್ಲಿ ನೆನೆಹಾಕಿರುತ್ತಿದ್ದರು. ನಂತರ ಎತ್ತಿನ ಜೋಡಿಗೆ ಹೇಳಿ   ಅಗಡಿ ರೆಡಿ ಮಾಡುತ್ತಿದ್ದರು , ಅಗಡಿಯಲ್ಲಿ  ನಳ್ಳಿ ಯಿಂದ ಸಮತ್ತಟ್ಟ ಮಾಡಿ ಭತ್ತ ಬಿತ್ತನೆ ಮಾಡುತ್ತಿದ್ದರು , ಭತ್ತದ ಸಸಿ ನಾಟಿ ಮಾಡಲು ಯೋಗ್ಯವಾದಗ ನಾಟಿ ಕಾರ್ಯ ಶುರು ಮಾಡುತಿದ್ದರು.

        ಮಲೆನಾಡಲ್ಲಿ ನಾಟಿ ಕಾರ್ಯ ಶುರುವಾದರೆ  ಒಂಥರ   ಹಬ್ಬದ ವಾತರವರಣವೇ ಸರಿ ಊರವರೆಲ್ಲ ಸೇರಿ  ಗುಂಪಾಗಿ ಮೈಯಳಿಗೆ  ಬ್ಯಾಚ್ ಮಾಡಿ ಗೋರಬು ಹೊತ್ತು ಹೆಂಗಸರು ಹರಟೆ ಹೊಡೆಯುತ್ತ  ಮುದುಕಿಯರು ಎಲೇ ಅಡಕೆ ಸುಣ್ಣದ ಡಬ್ಬಿ ಒಂಚೂರು ತಂಬಾಕು ಹಿಡಿದು ಗಂಡಸರು ಹಾರೆ ಬುಟ್ಟಿ ಹಿಡಿದು ಗದ್ದೆಗೆ ಇಳಿಯುವರು

Monday, 6 August 2018

ಎಂತಾ ಎಂತಾ ಎಂತಾ ಸಾಯೋದೆ ಹೇಳೇ ಎಂತಾ ಸಾಯೋದೆ.


ಎಂತಾ ಹುಚ್ಚು ಪ್ರೀತಿ ಅಂದರೆ


ನನ್ನ ಮಾತು ನಾನೆ ಕೇಳೇನೇ.


ಎದೆಯ ಬಡಿತ ನಿನ್ನೇ ಕೇಳಿದೆ.


ತೇಪ್ಪುಗ್ ಕೂತ್ಕೋ ಸುಮ್ನೇ ಅಂದಿನೇ.


ಕೂತು ಮೌನ ಜೊತೆಗೆ ಮಾತಾನಾಡಿದೆ.


ನಿನ್ನ ಮುದ್ದು ಮೊರೆ ನೋಡಿ ಇಂದು ಹಳ್ಳ ಹತ್ತೋ ಮುಂಚೆ ನಾನು.



ಎಂತಾ ಎಂತಾ ಎಂತಾ ಸಾಯೋದೆ ಹೇಳೇ ಎಂತಾ ಸಾಯೋದೆ.

ಎಂತಾ ಹುಚ್ಚು ಪ್ರೀತಿ ಅಂದರೆ


ನನ್ನ ಮಾತು ನಾನೆ ಕೇಳೇನೇ.


ಒಳಗೊಳಗ ಒಂಥರ ಪುಳಕ

ಎದಿಯೋಳಗೆ ನಿನ್ನದೇ ತವಕ.

ಕಾದಿಹೆನು ನೀ ಬರೋ ತನಕ.

ಶ್ವಾಸಲು ನಿನಜಪಾ..


ನೀ ಕಂಡ ಮೊದಲನೆ ದಿವಸ

ನಾ ಸೋತೆ ನಿನ್ನಯ ಅರಸ.


ಕೊಲ್ಲುವುದು ನಿನ್ನೀ ನಗುವ

ನನ್ನೀ ಮನಸಾ...










ಎಂತಾ ಎಂತಾ ಎಂತಾ ಸಾಯೋದೆ ಹೇಳೇ ಎಂತಾ ಸಾಯೋದೆ.

ಎಂತಾ ಹುಚ್ಚು ಪ್ರೀತಿ ಅಂದರೆ

ನನ್ನ ಮಾತು ನಾನೆ ಕೇಳೇನೇ.

ಎದೆಯ ಬಡಿತ ನಿನ್ನೇ ಕೇಳಿದೆ.

ತೇಪ್ಪುಗ್ ಕೂತ್ಕೋ ಸುಮ್ನೇ ಅಂದಿನೇ.

ಕೂತು ಮೌನ ಜೊತೆಗೆ ಮಾತಾನಾಡಿದೆ.

ನಿನ್ನ ಮುದ್ದು ಮೊರೆ ನೋಡಿ ನಾನು ಹಳ್ಳ ಹತ್ತೋ ಮುಂಚೆ ನಾನು.


Friday, 9 February 2018

ಹೀಗೊಂದು ದಿನ ಶಾಲೆಗೆ ಹೋಗಲು ಮನಸಿರಲಿಲ್ಲ, ಹೋಗಲು ಮನಸಿರದಿರುವುದಕ್ಕೂ  ಒಂದು ಕಾರಣವಿದೆ ಅದನ್ನು  ಮುಂದೆ ಹೇಳುತ್ತಹೋಗುತ್ತೇನೆ.2010 ರಲ್ಲಿ ಏಳನೆ ತರಗತಿ ಮುಗಿಸಿ ಎಂಟನೇ ತರಗತಿಗೆ ಆಗುಂಬೆಯ ಶ್ರೀ ವೇಣುಗೋಪಾಲ ಸ್ವಾಮಿ ಸ್ಕೂಲ್ ಅನ್ನು ಸೇರಿದೆವು. ಸೇರಿದೆವು ಎನ್ನುವುದರಲ್ಲಿಯೇ ನೀವು ಅರಿತುಕೊಳ್ಳಬೇಕಿತ್ತು ಇದ್ದವನು ನಾನೊಬ್ಬನೇ ಅಲ್ಲ ನನ್ನೊಡನೆ ಇನ್ನೊಬ್ಬನಿದ್ದ. ಇಬ್ಬರು ಸೇರಿ ಆಗುಂಬೆ ಶಾಲೆಗೆ ಇಪ್ಪತ್ತೆರಡು ಕಿಲೋಮೀಟರ್ ಪ್ರಯಾಸದ ಪ್ರಯಾಣ ಮಾಡಿ ಶಾಲೆಗೆ ತೆರಳುತ್ತಿದ್ದೆವು ನಮ್ಮಿಬ್ಬರಿಗೆ ಇಷ್ಟವಿಲ್ಲದಿದ್ದರು ಆಗುಂಬೆಯ ಆಶಾಕಿರಣ ಹಾಸ್ಟೆಲ್ನಲ್ಲಿ ನಮ್ಮಿಬ್ಬರ ಸಿಲುಕಿಸಲಾಯಿತು ,ನನಗಂತೂ ಆ ಹಾಸ್ಟೆಲ್ ಗೆ ಹೋಗೋಕೆ ಇಷ್ಟವೆ ಇರಲಿಲ್ಲ ಅಲ್ಲಿ ಬಿಸಿನೀರಿನ ಸ್ನಾನ ಮಾಡಬೇಕು ಎಂದಿದ್ದರೆ ಮನೆಯಿಂದ ಕಟ್ಟಿಗೆ ತೆಗೆದುಕೊಂಡು ಹೋಗಿ ಹಾಕಿಸಬೇಕಿತ್ತು

Wednesday, 7 February 2018

ನಾವು ತೀರ್ಥಹಳ್ಳಿಯವರು

ನಾವು ಅಂತವರು
ಹೃದಯಸ್ಪರ್ಶಿ ಗುಣದವರು
ಎದೆಯುಬ್ಬಿಸಿ ನಡೆಯುವವರು
ಬದುಕುವ ಛಲದವರು
ಎಲ್ಲರೂ ನಮ್ಮವರು
ನಾವು ತೀರ್ಥಹಳ್ಳಿಯವರು..

ಹಳ್ಳಿಯ ಸೊಬಗಿಗೆ
ಪಟ್ಟಣದ ಚಮತ್ಕಾರ.
ಚಿಗುರೋಡೆದು ನಿಂತಿದೆ
ಕೌಶಲ್ಯದ ಸಾಕ್ಷಾತ್ಕಾರ.
ಹಳ್ಳಿಯಿಂದ ದಿಲ್ಲಿಗೆ
ಮನಮುಟ್ಟಿದ ಗೋಪಾಲಗೌಡರು.

ಹಚ್ಚ ಹಸಿರಿನ ಸೊಬಗಿದು
ಸಮೃದ್ಧತೆಯ ನಾಡಿದು.
ಕುವೆಂಪು ಬರೆದದ್ದು
ವಿಶ್ವಮಾನವ ಸಂದೇಶವದು.
ಅಬಚೂರಿನ ಪೋಸ್ಟ್ ಆಫೀಸು
ಪೂರ್ಣಚಂದ್ರ ತೇಜಸ್ವಿ ಕಂಡದ್ದು.

ಆಗುಂಬೆಯ ಮನೆಯಿದು
ಬಿದನೂರ  ಧರೆಯಿದು
ಮಾರಿಚವಧಿಸಿ ಮೃಗವಧೆಯಿದು.
ಭುವನಗಿರಿಯ ಭವ್ಯತೆಯಿದು
ಕುಪ್ಪಳ್ಳಿಯ ಕವಿಕುಟಿರವಿದು
ಪರಶುವಿನ ತೀರ್ಥರಾಜಪುರವಿದು.

ಗುಬ್ಬಚ್ಚಿಯ ಗೂಡದು
ಪರಿಶ್ರಮದ ಫಲವದು
ನಮ್ಮೆಲ್ಲರ ಮಾತದು
ಎದೆಯ ಬಡಿತವದು
ರೋಮಾಂಚನ ನಮ್ಮೂರದು
ಹೆಮ್ಮೆಯ ತೀರ್ಥಹಳ್ಳಿಯದು.

ನಾವು ಅಂತವರು
ಹೃದಯಸ್ಪರ್ಶಿ ಗುಣದವರು
ಎದೆಯುಬ್ಬಿಸಿ ನಡೆಯುವವರು
ಬದುಕುವ ಛಲದವರು
ಎಲ್ಲರೂ ನಮ್ಮವರು
ನಾವು ತೀರ್ಥಹಳ್ಳಿಯವರು.

ನಿಮ್ಮ
        ಸಂಕೇತ ಜಿ ಎಮ್ ತೀರ್ಥಹಳ್ಳಿ

Monday, 5 February 2018


ಎದೆಗೆ ಬಂದ ಖುಷಿಯ ಇಂದು
ಹೇಳೋ ಮುಂಚೆ ಜಾರಿ ಹೋದೆ ನೀನು.

Saturday, 3 February 2018

ನಂದು ತೀರ್ಥಹಳ್ಳಿ

ನಾನೇ ಈಗ ಬರಿಯಲು ಹೊರಟಿರುವೆನಲ್ಲ  ಇದು ನನ್ನದೇ ಆದ ಕಥೆ.
ಹಾಗೋ ಹೀಗೊ  ಪದವಿ ಶಿಕ್ಷಣ ಮುಗಿಸಿದೆ. ಹೆಗಲ ಮೇಲೆ ಭಾರವಾದ ಅನುಭವ, ಮನೆಯಲ್ಲೇನು ಭಾರ ಹಾಕಿರಲಿಲ್ಲ, ಆದರೂ ದುಡಿಯುವ ಹಂಬಲ. ಮನೆಯಲ್ಲಿ ಕೂರಲಾರದೆ,  ಮನೆಯನ್ನು ಬಿಡಲಾರದೆ, ತೀರ್ಥಹಳ್ಳಿಯನ್ನು ಮರೆಯಲಾಗದೆ ಮನೆಯಲ್ಲೇ ಕೂತು  ಒಂದೆರಡು ತಿಂಗಳು ಮಲಗಿ ಎದ್ದೆ ಕಾಲ ಕಳೆಯುವಂತಹ ಪರಿಸ್ಥಿತಿ ಕೆಲವೊಮ್ಮೆ ಮಾತಿಗೆ ಒಂದು ತಿಂಗಳಾದ ನಂತರ ಮನೆಯಲ್ಲಿ ಮನ ಚುಚ್ಚಿಗೆಯ ಮಾತುಗಳು ಹೊರಬರಲಾರಂಭಿಸಿದವು ಅದರಲ್ಲಿಯೂ ಮುಖ್ಯವಾಗಿ "ಅವ ನೋಡು ಯಾರ್ದೋ ಕೈಯೊ ಕಾಲೋ ಹಿಡಿದು ಬೆಂಗಳೂರಿನಲ್ಲಿ ಒಂದು ಕೆಲಸ ಗಿಟ್ಟಿಸಿಕೊಂಡೇ ಬಿಟ್ಟ" ನೀನು ಮನೆಯಲ್ಲೇ ಮಲಗಿ ಕಾಲ ಕಳಿ ಎಂದು.ಹೀಗಿರುವಾಗ ನನ್ನ ಪದವಿ ಗೆಳೆಯರು ಸಹ ಮನೆಯಲ್ಲಿ ಇದೆ ತರಹದ ಪೋಷಕರ ವರ್ತನೆಗೆ ಬೇಸತ್ತು ನಾವೆಲ್ಲರೂ ಸೇರಿ ಬೆಂಗಳೂರು ಪಟ್ಟಣ ಸೇರಿ ಬಿಡುವ ಯೋಚನೆ ಮಾಡಿಯೇ ಬಿಟ್ಟೆವು.ಆದಷ್ಟೂ ಕಡಿಮೆ ಹಣದಲ್ಲಿ ಬೆಂಗಳೂರು ಸೇರಬೇಕು ಎನ್ನುವ ಮನಸ್ಥಿತಿಯಲ್ಲಿ ಇದ್ದವರು ನಾವು ಮೂವರು ತೀರ್ಥಹಳ್ಳಿ ಇಂದ ಬಸ್ಸಿನಲ್ಲಿ ಹತ್ತಿ ಶಿವಮೊಗ್ಗ ವರೆಗೆ ಹೋದ ನಾವು ಅಲ್ಲಿಂದ ಆಟೋ ಮುಕಾಂತಾರ ರೈಲ್ವೆ ನಿಲ್ದಾಣ ತಲುಪಿದೆವು, ಅಲ್ಲಿ ಟಿಕೆಟ್ ಪಡೆದು ರೈಲಿಗಾಗಿ ಕಾದು ಕುಳಿತಿರುವವರಿಗೆ ರೈಲು ಬಂದ ನಂತರ ಗರಬಡೆದು ಹೋಯಿತು ಕಾರಣ ರೈಲ್ವೆ ಸ್ಟೇಷನಿನಲ್ಲಿ ಕಿಕ್ಕಿರಿದು ಸೇರಿದ್ದ ಜನ ಸಮೂಹ ಅಷ್ಟು ಉದ್ದದ ರೈಲು ಬೋಗಿಯನ್ನು ತುಂಬಿ ಹೋಗಿತ್ತು ಮೆಟ್ಟಿಲಿನ ಮೇಲು ಕಾಲು ಇಡಲಾಗದ ಪರಿಸ್ಥಿತಿಯಿಂದಾಗಿ ಕಡಿಮೆ ಹಣದಲ್ಲಿ ಬೆಂಗಳೂರು ಪಟ್ಟಣ ಸೇರುವ ನಮ್ಮ ಆಸೆಗೆ ಮೊದ್ಲೇ ತಣ್ಣೀರು ಎರಚಿತು ಈ ರೈಲು.ಅಲ್ಲಿಂದ  ಇನ್ನೇನು ಮಾಡಲು ಸಾಧ್ಯವೆಂದು ಯೋಚಿಸಿ ಅಲ್ಲಿಂದ auto ಮುಕಾಂತಾರ ಶಿವಮೊಗ್ಗ ಬಸ್ ಸ್ಟ್ಯಾಂಡ್ ಕಡೆಗೆ ಹೊರಡಲು ಆಟೋ ಹಿಡಿದಾಗ ಆತನಿಗೆ ನಡೆದದ್ದು ವಿವರಿಸಿದಾಗ ಆತ ನಮ್ಮ ಟಿಕೆಟ್ ಗಳನ್ನು ತೆಗದುಕೊಂಡು ಹೋಗಿ ಅರ್ಧದಷ್ಟು ಹಣವನ್ನ ನಮ್ಮ ಕೈಗೆ ತಂದಿಟ್ಟರು ಕೊಂಚ ನಿರಾಳವಾಯಿತು ಅದರಿಂದ ಆಟೋ ಬಾಡಿಗೆ ಕೊಟ್ಟೆವು. ನಂತರ ನಮ್ಮ ಪಯಣ ಸಾಗಿದ್ದು ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಕಡೆಗೆ ಅಲ್ಲಿ east and west ಎಂಬ ಖಾಸಗಿ ಬಸ್ ಹತ್ತಿ ಬೆಂಗಳೂರು ಕಡೆ ಹೊರಟ ನನಗೆ ಮನದಲ್ಲೇ ಬೇಸರ ಕಾಡ ತೊಡಗಿತ್ತು ಆದರೂ ಗೆಳೆಯರ ಜೊತೆ ಸೇರಿ sleepr ಕೋಚ್ ಬಸ್ಸಿನಲ್ಲಿಯೇ ರಾತ್ರಿ ಹೊರಟು ಮುಂಜಾನೆಯ ಸಮಯಕ್ಕೆ ಬೆಂಗಳೂರು ತಲುಪಿದ್ದೆವು.ಅನಂತರ ನಮಗೆ ಎದುರಾಗಿದ್ದು ಬೆಂಗಳೂರಿನಲ್ಲಿ ಎಲ್ಲಾದರೂ ಉಳಿದು ಕೊಳ್ಳಬೇಕು ಎಂಬುದು ಆಗ ನನ್ನ ಗೆಳೆಯನ ಗೆಳೆಯ ಬೆಂಗಳೂರಿನಲ್ಲಿ ಇದ್ದಿದ್ದರಿಂದ ಆತನಿಗೆ ಕರೆ ಮಾಡಿ ಅಲ್ಲಿಗೆ ಹೋದೆವು ಆತ ಇದ್ದ ಸ್ಥಳ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ಅಲ್ಲಿ ಹೋದ ನನಗೆ  ಮೊದಲೇ ಎದುರಾಗಿತ್ತು shock ಅವರಿದ್ದ ರೂಮ್  ಯಾವತರದಲ್ಲಿಯೂ ಮನೆಯ ತರಹ ಕಾಣಲೇ ಇಲ್ಲ  ನಮ್ಮನೆಯ ಸಗಣಿ ಬಳೆದ ನೆಲವಾದರು ಚೂರೂ ಚೆನ್ನಾಗಿರುತ್ತಿತ್ತೇನೋ ಆದರೆ ಅಲ್ಲಿನ ಮುರಿದು ಒಡೆದು ಹೋದ ಟೈಲ್ಸ್ ನಿಂದ ನೆಲವನ್ನ ಮಾಡಲಾಗಿತ್ತು ಚಿಕ್ಕ ಕೊಣೆ ಅದ್ರಲ್ಲಿ ಒರಟು ಜನ ಅಂದೆ ನನಗನ್ನಿಸಿತು ನನ್ನುರೆ ಚಂದ ನಮ್ಮೂರಿನ ಜನರೇ ಮೃದುಸ್ವಭಾವದವರೆಂದು. ಆದರೂ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಹಾಗೆಯೇ ಬೆಳಗ್ಗೆ ಹಲ್ಲುಜ್ಜಲೆಂದು ಸಂದಿಮೂಲೆಯೊಳಗೆ ನುಗ್ಗಿ  ಹೋಗಿ ಕೂತರೆ ನಿಲ್ಲಾಲಾಗದೆ toilet ನೋಡಿ  ಬೆಂಗಳೂರು ಜೀವನಕ್ಕೆ ಅರ್ಧ ತಲ್ಲಣವಾಗಿ ಹೋದೆನು ಕೇವಲ ಬೆಂಗಳೂರು ತಲುಪಿ  ಮೂರ್ನಾಲ್ಕು ಘಂಟೆಯೊಳಗೆ ಸುಸ್ತಾಗಿ ಹೋಗಿದ್ದೇ ಹಾಗೆಯೇ ಅಲ್ಲಿಂದ  ಹೊಂಟಿದ್ದೆ ನಮ್ಮ ಪಯಣ ಉದ್ಯೋಗ ಗಿಟ್ಟಿಸಿಕೊಳ್ಳುವತ್ತ, ಕೆಲಸಕ್ಕಾಗಿ ರಣಹದ್ದುಗಳಂತೆ ಊರುಬಿಟ್ಟು ಬೆಂಗಳೂರಿಗೆ ಬಂದ ನಮಗೆ ಕುಳ್ಳಪ್ಪ ಸರ್ಕಲ್ ಬಳಿ ಕೆಲಸದ interview ಗೆ ಬರಲು ಹೇಳಿದರು ನಾವು ಕುಮಾರಸ್ವಾಮಿ layout ನಿಂದ ಹೊರಟ ನಮಗೆ ಮಜೆಸ್ಟಿಕ್ ತಲುಪುವುದರೊಳಗೆ ಮಧ್ಯಾಹ್ನನದ ಸಮಯವಾಗಿ ಹೋಗಿತ್ತು, ನಮ್ಮೂರು ತೀರ್ಥಹಳ್ಳಿಯಲ್ಲಿ ಶಿವಮೊಗ್ಗಕ್ಕೆ 1 ಗಂಟೆಯಲ್ಲಿ ತಲುಪುತಿದ್ದ ನನಗೆ ಬೆಂಗಳೂರಿನ ವಾಹನ ದಟ್ಟಣೆ ಹುಚ್ಚಿಡಿಸಿದಂತೂ ನಿಜ.ಅಲ್ಲಿನ ಜನರು ಹಾಗೆಯೇ ಕಿವಿಯಲ್ಲಿ ear ಫೋನ್ ಸಿಕ್ಕಿಸಿಕೊಂಡು ಅಲ್ಲಿನ ಜೀವನಕ್ಕೆ ready ಆಗಿಯೇ ನಿಂತಿರುತ್ತಾರೆ ಆದರೆ ಅದು ನನ್ನಿಂದ ಸಾಧ್ಯವಿರಲಿಲ್ಲ, ಹಾಗೋ ಹೀಗೊ ಕೋಸಾರಿಡಿಕೊಂಡು  ಅಪರಾಹ್ನ 3.30 ರ ಸಮಯಕ್ಕೆ ಇಂಟರ್ವ್ಯೂ ಅಟೆಂಡ್ ಮಾಡಿ ಕೆಲಸವನ್ನು ಗಿಟ್ಟಿಸಿಕೊಂದಿದ್ದು ಆಯಿತು ಆದ್ರೆ 3.30  ಆದ್ದರಿಂದ ಹೊಟ್ಟೆ ಚುರುಗುಟ್ಟಲು ಶುರುವಾಗಿತ್ತು ಬೆಂಗಳೂರಿನ ದುಬಾರಿ ದುನಿಯದಲ್ಲಿ ಒಳ್ಳೆಯ ಹೋಟೆಲ್ ಹೋಗಿ ತಿನ್ನುವ ಪರಿಸ್ಥಿತಿ ನಮ್ಮದಾಗಿರಲಿಲ್ಲ ಅಲ್ಲಿಯೇ ದಾರಿಯ ಬದಿಯಲ್ಲಿ ವಾಹನದಲ್ಲಿ ಊಟ ಮಾರಾಟ ಮಾಡಲಾಗುತ್ತಿತ್ತು ಜನವೋ ಜನ ಆ ಊಟ ತಿನ್ನಲು ನಾವು ಹೊಸದು ಚನ್ನಾಗಿರಬಹುದೆಂದು ಹೋದೆವು  ಹಾಗೂ 50 ರೂಪಾಯಿ ನೀಡಿ ಊಟ ತಗೊಂಡೆವು ತಗೊಂಡು ಮೊದಲ ತುತ್ತು ಇಟ್ಟವನಿಗೆ ಅಮ್ಮನಿಗೆ ಉಪ್ಪು ಜಾಸ್ತಿ ಚಪ್ಪೆ ಕಾರ ಹುಳಿ ಅಂದದೆಲ್ಲ ನೆನಪಾಯಿತು ಜಗಳ ಕಿತ್ತದೆಲ್ಲಾ ಕಣ್ಣ ಮುಂದೆ ಬರತೊಡಗಿತು ಕಾರಣ ನಾವು ತಿಂದದರಲ್ಲಿ  ಅದ್ಯಾವುದೂ ಇರಲಿಲ್ಲ. ಮನೆಯಲ್ಲಿ ನಾನು ಮಣೆಯನ್ನ ಹಾಕಿ ನೆಲದಲ್ಲಿ ಕೂತು ಆರಾಮಗಿ ಊಟ ಮಾಡುತ್ತಿದ್ದ ನನಗೆ ಬೀದಿಯಲ್ಲಿ ನಿಂತು ಉಣ್ಣಲು ಮುಜುಗರವಾಗಿದಂತೂ ನಿಜ.. ನಮ್ಮೂರು ತೀರ್ಥಹಳ್ಳಿಯಲ್ಲಿ ಬೀದಿಯಲ್ಲಿ ನಿಂತು ಊಟ ಮಾಡುವವರು ಬ್ಯಾಟರಿ ತೆಗೆದು ಹುಡುಕಿದರು ಸಿಗುವುದು ಕಷ್ಟ. ಅದೇ ಐವತ್ತು ರೂಪಾಯಿಗೆ ನಮ್ಮೂರಿನ ಹೋಟೆಲ್ ನಲ್ಲಿ ac ಹಾಕಿಸಿ ಕುಷ್ಕ ತಿನ್ನುತ್ತಿದ್ದದೆಲ್ಲ ನೆನಪಾಗುತ್ತಿತ್ತು ಕೊಳಚೆ ರಸ್ತೆ, ನಾವು ಮಲೆನಾಡಿಗರು ಮಣ್ಣಿನಲ್ಲಿಯೇ ಬಿದ್ದು ಹೊರಲಾಡಿದರು ಅಷ್ಟು ಚಂದದ ಮಣ್ಣಿನಲ್ಲಿ  ಇದ್ದ ನನಗೆ ಆ ಬೆಂಗಳೂರಿನ ಮಣ್ಣಿನ ಮೇಲೆ ಕಾಲಿಡಲು ಕಷ್ಟವಾಗುತ್ತಿತ್ತು ಎಲ್ಲೋ ಪ್ಯಾಂಟ್ ಗೆ ಹಿಂದೇ ಇಂದ ಹಾರಿದ್ದ  ಕೆಸರು  ಮಣ್ಣು ಅಂತ ಊಹಿಸಲು ಕಷ್ಟವಾದ ಪರಿಸ್ಥಿತಿಗೆ ಕೊಳಚೆ ಮಿಶ್ರಿತವಾಗಿ ಹೋಗಿತ್ತು  ಇಷ್ಟೆಲ್ಲ ಆಗುವ ಹೊತ್ತಿಗೆ  ಸಂಜೆ ಸಂಜೆ ಆಗುತ್ತಾ ಬಂದಿತ್ತು ಅಷ್ಟ್ತೊತ್ತ್ಗಾಲೇ ಮನಸು ಮನೆಕಡೆ ಹೊರಡಲು ಸಿದ್ಧವಾಗಿತ್ತು  ಕಾಲು ಕೀಳಲು ರೆಡಿ ಆಗಿತ್ತು, ಇಷ್ಟೆಲ್ಲ ಹೇಳಿದಕ್ಕೂ ನಂದು ತೀರ್ಥಹಳ್ಳಿ ಅಂದಿದಕ್ಕೂ ಏನು ಸಂಬಂಧ ಅಂದ್ಕೊಬಿಟ್ರಾ?
ನಂದು
ತೀರ್ಥಹಳ್ಳಿ ಯಾಕೆ ಗೊತ್ತ ಅಲ್ಲಿ

ಸ್ವಚ್ಛಂದವಾಗಿ ಹಾರಡಬಲ್ಲೆ.
ಮನಬಿಚ್ಚಿ ಎಲ್ಲೆಡೆಯೂ ಕನ್ನಡ ಮಾತಡಬಲ್ಲೆ.
ತಲೆ ಎತ್ತಿ ನಡೆಯಬಲ್ಲೆ,
ನಮ್ಮವರ ನಡುವೆ ಸಹಬಾಳ್ವೆ ಅರಿತು ಸಾಗಬಲ್ಲೆ.
ಶುದ್ಧಗಾಳಿ ಸೇವಿಸಬಲ್ಲೆ,
ಕೃಷಿ ಪಾಠ ಅರಿತು ಪೃಕೃತಿಯ ಮಾತಾನಾಡಿಸಬಲ್ಲೆ.

ತೀರ್ಥಹಳ್ಳಿಯಿದು ನನ್ನದಿದು
ಮಲೆನಾಡ ಹೆಬ್ಬಾಗಿಲಿದು ನಮಗೆಲ್ಲರಿಗೂ ಹೆಮ್ಮೆಯಿದು.
 
ನಾಕಾಣಿಯ ಶುಂಠಿ ಪೇಪರಿನಲ್ಲಿ ನಲ್ಲಿ
ಹಂಚಿ ತಿಂದವರು ನಾವು.
ಹುರುಳಿಕಟ್ಟು ಸಾರಿನಲ್ಲಿ ಕಡುಬು
ನುರಿದವರು ನಾವು.
ಚಾಟ್ರಿ ಬಿಲ್ಲು ಹಿಡಿದು
ಗುರಿಇಟ್ಟವರು ನಾವು,
ನೇರಳೆ ಮರದಲ್ಲಿ ನೆರಳೆಹಣ್ಣ
ಕಿಟ್ಟವರು ನಾವು,
ಹೆಬ್ಬಾಲಿಸಿನ ಕಾಯಿನ ಹುಲುಗೊಂಬೆಯಡಿ
ಹಣ್ಣಿಗೆ ಇಟ್ಟವರು ನಾವು.

ಖುಷಿಯ ಕಂಡವರು ನಾವು.
ನಿಂತು ಉಣ್ಣದವರು ನಾವು.
ಸಭ್ಯತೆಯ ಸಮಾಜದವರು ನಾವು.
ತೀರ್ಥಹಳ್ಳಿಯವರು ನಾವು.

ತೀರ್ಥಹಳ್ಳಿಯಿದು ನನ್ನದಿದು
ಮಲೆನಾಡ ಹೆಬ್ಬಾಗಿಲಿದು ನಮಗೆಲ್ಲರಿಗೂ ಹೆಮ್ಮೆಯಿದು.



Friday, 19 January 2018

ಬದುಕಿಗೆ ನಿಮ್ಮದೇ ಇರಲಿ ಶೀರ್ಷಿಕೆ

ಜೀವನ ಹತ್ತಿಯ ಹಾಸಿಗೆಯಲ್ಲ
ಎಂದಿಗೂ  ಮೃದುವಾಗಿರಲೆಂದು ಬಾವಿಸಲು.
ಛಲದ ಟೊಂಕ ಕಟ್ಟಿ ನಿಂತರೆ ಮಾತ್ರ
ಪಥದ ಮಧ್ಯ ನಿಂತು  ಮಾರ್ಗ ಹುಡುಕದಿರುವಿರಿ.

ಬದುಕಿನಲ್ಲಿ ಬವಣೆಗಳು ಇರುವುದೇ ಸಹಜ
ಮೆಟ್ಟಿನಿಂತು ಹೋರಾಟ ಮಾಡುವುದೇ ಮನುಜ.
ಅದರಲ್ಲಿ ನೀವು ಓಬ್ಬರಾದರೆ ಬದುಕು
ನಿಮ್ಮೊಡನೆಯೇ ಕೂತು ಸವಿಯಲು ಆಸ್ಪದ.

ದಾಟದಿರಿ ಎಲ್ಲೆಯನ್ನು ಮೀರಿ
ಪ್ರೀತಿಸಿ ನಮ್ಮ ನಡುವಿನಲ್ಲಿ ಇರುವವರನ್ನು.
ಬೆಟ್ಟು ಮಾಡಿ ತೋರಿಸುವವರ ನಡುವೆ
ಆದರ್ಶದ ಬೊಟ್ಟು ನೀವಾಗಿರಿ.

ಚಿಂತನೆಯ ಶಿಖರವನೆರಲು
ಸಾಧನೆಯು ಪರಿಶ್ರಮದ ಫಲಶ್ರುತಿ.
ಸ್ಪಂದಿಸಿ ನೋವುಂಡ ಜೀವಗಳಿಗೆ
ಕೈ ಹಿಡಿಯುವುದು ನಿಮ್ಮನ್ನು ಒಂದೊಮ್ಮೆಗೆ.

ಕನಸು ಕಟ್ಟಿ ಹೊರ ಚಿಮ್ಮಿಸದೆ ಕೂರದಿರಿ,
ಹೊರ ಬಂದು ಸೂರ್ಯನ ಕಿರಣದೊಂದಿಗೆ
ಸೇರಿ ಬಣ್ಣಗಳನ್ನು ತುಂಬಿಸಿ ಕೊಂಡು ಪ್ರಜ್ವಲಿಸಿರಿ.
ಕಾಮನ ಬಿಲ್ಲಾಗಿರಿ ಆದರ್ಶ ಪ್ರಜೆಯಾಗಿರಿ.



Saturday, 9 December 2017

ಗೊತ್ತಿರೋ ಸತ್ಯ

ಮಲೆನಾಡು ಅಂದ್ರೆ ನೆನಪಾಗೋದು ಚಿಕ್ಕಮಗಳೂರು ಶಿವಮೊಗ್ಗ. ಆ ಶೃಂಗೇರಿ ಹೊಸನಗರ ತೀರ್ಥಹಳ್ಳಿ  ಊರಿಗೆ ನಿಸರ್ಗವೇ ಸೀರೆಯಾಗಿ ಹೊದ್ದುಕೊಂಡು  ನಿಂತಿರುವಂತೆ ಭಾಸವಾಗುತ್ತದೆ ಸಾಮಾನ್ಯವಾಗಿ .ಮಲೆನಾಡಿನಲ್ಲಿ  ವೈವಿಧ್ಯಮಯ ಪಕ್ಷಿ ಸಂಕುಲ ಪ್ರಾಣಿಸಂಕುಲಗಳಿಗೆ ಆಶ್ರಯ ತಾಣವಾಗಿದೆ ಅದೆಲ್ಲಾನೂ ಬಿಟ್ಟು ಮತ್ತೊಂದಿದೆ ಗಿಡಮೂಲಿಕೆಗಳ ತಾಣವು ಹೌದು.ಇಂದು ಆ ಗಿಡಮೂಲಿಕೆಯ ಗಿಡಗಳು ಕಾಲು ಬುಡದಲ್ಲಿದ್ದರು ಅದನ್ನ ತಿಳಿಯಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇವೆ ಎಲ್ಲಾದಕ್ಕೂ ಕಾರಣ ನಮ್ಮಲ್ಲಿಲ್ಲವಾದ ಆಸಕ್ತಿ ಮತ್ತು ಇಂಗ್ಲೀಷ್ ಮೆಡಿಸಿನ್ ನ ಅಗಾಧವಾದ ಪ್ರಭಾವ ಇಷ್ಟೇ ಅನ್ಕೋಬೇಡಿ ಇನ್ನೂ ಒಂದು ಪ್ರಮುಖವಾದ ಸಂಗತಿ ಇದೆ ಅದೇನೆಂದರೆ ಮೂಢನಂಬಿಕೆ ಅಂತ ಹೇಳಬೇಕೋ ಅಜ್ಞಾನವೋ ತಿಳಿಯುತ್ತಿಲ್ಲ ಅದು ನಿಮಗೆ ಬಿಟ್ಟಿದ್ದು ಓದುಗರೇ ಊಹಿಸಿಕೊಳ್ಳಿ.ಈ ಮೂಢನಂಬಿಕೆ ಅಂತಾ ಹೇಳಿ ಸುಮ್ಮನೆ ಕೂತರೆ ಹೇಗೆ ಅದರ ಬಗ್ಗೆ ವಿವರಣೆ ಹೀಗಿದೇ ಹಿಂದೆ ಮತ್ತು ಈಗಲೂ ಸಹ ಕೆಲವೆಡೆ ಗಿಡಮೂಲಿಕೆ ಪದ್ದತಿ ಇದ್ದರು ಸಹ ಹಲವೆಡೆ ನಶಿಸಿ ಹೋಗಿದೆ ಹಿಂದೆ ನಮ್ಮ ಸುತ್ತಮುತ್ತಲಿನಲ್ಲೆ ಮಕ್ಕಳಿಗೆ ಕಫಾ ಗೆ ಔಷದಿ ಕೊಡುವವರು,ಕಣ್ಣಿನ ಹೂವಿಗೆ ಔಷದಿ ಕೊಡುವವರು , ಇನ್ನೂ  ಇತರೇ ಔಷದಿ ಕೊಡುವವರು ಇದ್ದರು ಅವರೆಲ್ಲರೂ ಸಹ ಗಿಡಮೂಲಿಕೆಗೆ ಬಳಸುವುದು ಏನೆಂದು ಇನ್ನೊಬ್ಬರಿಗೆ ಹೇಳದೆ ಇದ್ದುದು ಇಂದು  ಗಿಡಮೂಲಿಕೆ ನಶಿಸಲಿಕ್ಕೆ ಬಹಳ ಮುಖ್ಯ ಕಾರಣ.ಔಷದಿ ಮಾಡುವವರು ಯಾವ ಯಾವ ಗಿಡಮೂಲಿಕೆ ಸಸ್ಯಗಳನ್ನು ಬಳಸುತ್ತೇವೆ ಎಂದು ಹೇಳಿದರೆ ಗಿಡಮೂಲಿಕೆಯ ಪ್ರಭಾವ ಫಲಾನುಭವಿಗಳಿಗೆ ಆಗುವುದಿಲ್ಲ ಎಂಬಾ ನಂಬಿಕೆ.ಇಂದು ಎಷ್ಟೋ ಕಾಯಿಲೆಗಳಿಗೆ ಆಂಗ್ಲ ಮೆಡಿಸಿನ್ ಬಂದಾಗಿಯೂ ಸಹ ಬಾರಿ ಡಿಮ್ಯಾಂಡ್ ಇರೋದು ಮಕ್ಕಳ ಕಫ ತೆಗಿಯುವ ವಿಧಾನದ ಗಿಡಮೂಲಿಕೆಗೆ, ಆ ಗಿಡಮೂಲಿಕೆ ಹೇಗೆಂದು ನಿಮ್ಮ ಮುಂದೇ ವಿವರಿಸೋಣ ಎಂದರೆ ಗಿಡಮೂಲಿಕೆ ಮಾಡುವವರು ನಮಗೂ ಹೇಳಬೇಕಲ್ಲ. 
      ಹೀಗೆ ಒಂದಿನ ದಾರಿಯಲ್ಲಿ ನಡ್ಕೊಂಡು ಹೋಗ್ಬೇಕಾದ್ರೆ  ಗಿಡದ ಪೊದೆಯೊಳಗೆ  ಏನೋ ಶಬ್ದ ಹೋಗಿ ನೋಡಿದೆ ಒಬ್ಬರೇ ಇದ್ದರು ಏನೋ ಬಳ್ಳಿಯ ಬೇರನ್ನು  ಅಗೆದು ಕೀಳುತ್ತಿದ್ದರು ಹತ್ತಿರ ಹೋಗೋದಕ್ಕೂ ಬಿಡದೆ ಬೇರೆಯೇ ಮಾತನಾಡಿ ಕಳಿಸಿಬಿಟ್ಟಿದ್ದರು. ಹೀಗೆ ಆಯುರ್ವೇದ ಮಾಡುವವರು ಯಾರಿಗಾದರೂ ಮೂಲಿಕೆಕೊಡುವಾಗ ಯಾರ ಬಳಿಯೂ ಮಾತಾನಡುವುದಿಲ್ಲ ಯಾರಿಗೂ ಏನು ಬಳಕೆ ಮಾಡಿದ್ದೇವೆ ಎಂದು ಕಿಂಚಿತ್ತೂ ಮಾಹಿತಿಯನ್ನು ನೀಡದೆ ಭಾರತದ ಅತ್ಯಮೂಲ್ಯ ಪದ್ದತಿಯನ್ನು ಉಸಿರು ನಿಲ್ಲುವುದರೊಂದಿಗೆ  ತಮ್ಮೊಡನೆ ಕರೆದೊಯ್ಯುವರು.

Thursday, 7 December 2017

ರೈತ


ರೈತ ಏನಾಂದರು ಅವ ನಮ್ಮ ಅನ್ನಾಧಾತ.
ಹಸಿದವರ ಒಡಲುಣಿಸುವ ಜೀವಧಾತ.
ಜಗತ್ತನ್ನು ಬೆಳಗುವ ಸೌಖ್ಯಪ್ರಧಾತ.

ವರ್ಷಧಾರೆಯಲಿ ಮೈಯೊಡ್ಡಿ ನಿಂತರು,
ಕಷ್ಟದ ಬೆವರು ತೀರದ ರೈತ.
ಜೀವನದ ಪರಿಪಾಠ ಅರಿಯದೆ,
ಪ್ರಕೃತಿಯ ಮಡಿಲಲ್ಲಿ  ಬದುಕುವ ರೈತ.
ಎದೆಯೊಡೆದರು ಛಲ ಬಿಡದೆ ಬಾಳುವ ರೈತ.
ಅವನಿರದೆ ಈ ಭೂಮಿ ನಡುವುದು ಖಚಿತ.
ಸಿರಿವಂತರ ಗುಲಾಮ ರೈತ,ದೇಶದ ಸೂತ್ರಧಾರ ರೈತ.
ನಮಗಿಂದು ಅವ ಬರೀ ಅನ್ನಧಾತ.

ಅರಿಯಬೇಕಿದೆ ಅವನ ಮನದ ಮಿಡಿತ.
ಕೈಯ ಹಿಡಿದು ಸಾಗೋಣ ನಗುನಗುತ.
ಏನಾದರೂ ಅವ ಅನ್ನಧಾತ.
ಜಗತ್ತನ್ನು ಬೆಳಗುವ ಸೌಖ್ಯಪ್ರಾಧಾತ.

1970 ರಲ್ಲಿ ಹೀಗಿತ್ತಂತೆ ಮಲೆನಾಡು

ದಟ್ಟ ಕಾಡು ,ಮನೆ ಮುಂದೆ ಜಮೀನು  ಊರಿಗೊಂದೆ ಮನೆ ನೆರೆಮನೆ ನೋಡಬೇಕಾದರೆ ಮೈಲಿಗಟ್ಟಲೇ ದೂರ.ಗೋಡೆಯಿಲ್ಲದ ಮನೆಗಳು ಸಗಣಿಯ ನೆಲ ಮತ್ತು ಅಡಿಕೆಯ ಕೊನೆಮಟ್ಟೆ  ಸುಟ್ಟು ಕರಿ ಉಂಡೆ ಮಾಡಿಕೊಂಡು  ಬಳೆದಿದ್ದ ಕರಿನೆಲ. ಕರಿನೆಲದಮೇಲೆ ಓಡಾಡಿ ಪಾದ ಮೈಕೈ ಕಪ್ಪಾಗಿರುತ್ತಿದ್ದವು.ಅಂತೆಯೇ ಮನೆಯೇ ಆಚೆ ಈಚೆಯೆ ಕೋವಿ ಹಿಡಿದು ಹೋದರೆ ಬರುವಾಗ ಕೈಯಲ್ಲಿ ಮೊಲ ಹೊಡೆದು ತರುತ್ತಿದ್ದದ್ದು, ಮನೆಯ ತುಂಬಾ ಮಕ್ಕಳು ಅಜ್ಜಿಯ ಆರೈಕೆ, ಅಂದು ಸಂಜೆ ಆರು ಗಂಟೆಯ ಒಳಗೆ ಊಟ ಮಾಡಿ ಬಡಿಸಿ ಮಲಗಿಸಿರುತ್ತಿದ್ದರು ಮಕ್ಕಳನ್ನ ಕಾರಣ ಆ ಹಿಂದೆ ವಿದ್ಯುತ್ ವ್ಯವಸ್ಥೆ ಇರಲಿಲ್ಲ ಹಾಗೆಯೇ ಬೆಂಕಿ ಪೊಟ್ಟಣ ದ ಒಂದು ಕಡ್ಡಿಯನ್ನ ಉರಿಸಿಲಿಕ್ಕೋ ಬಡತನ ಆದ್ದರಿಂದ ಸಂಜೆಯ ಸಮಯಕ್ಕೆ ಸರಿಯಾಗಿ ದೊಡ್ಡ ಮರದ ತುಂಡನ್ನು ಒಲೆಗೆ ಹಾಕಿ ಮಲಗುತ್ತಿದ್ದರು ಯಾಕಂದರೆ ಬೆಳಗ್ಗೆ ಅದನ್ನ ಉರಿಸಿ ಬೆಂಕಿ ಮಾಡಲು.
ಆ ಕಾಲದಲ್ಲಿ  ಹಸಿ ಏಡಿಯ ಕಡೆದು ಸಾಂಬರ್ ಮಾಡುವುದೇ ಒಂದು ವಿಶೇಷ ಮತ್ತು ಹಾಗೆಯೇ ಚಗಳಿ ಇರುವೆಯ ಚಟ್ನಿ  ಮಲೆನಾಡಿನಲ್ಲಿ  ಅಂದು ಮಾಡ್ತಾ ಇದ್ದರಂತೆ . ಹಾಗೆಯೇ ಗೇಣಿಗೆ ಗದ್ದೆಗಳನ್ನು ಮಾಡುತ್ತ ತಿಂಗಳುಗಟ್ಟಲೆ ಗದ್ದೆನೆಡುವುದು ತಿಂಗಳುಗಟ್ಟಲೆ ಗದ್ದೆ ಕೊಯ್ಯುವುದು ಭತ್ತ ಕುಟ್ಟುವುದೇ ಕೆಲಸ ವರ್ಷಪ್ರತಿ ಎಲ್ಲರಿಗೂ.ಅದರ ಮದ್ಯೆ  ಕಬ್ಬಿನ ಕೋಪ್ಪುರಿಗೆ ತೊಳೆದ ನೀರಿನ ಸಾರಾಯಿ ಮನೆಯಲ್ಲಿ ಮಾಡಿಟ್ಟಿರುತ್ತಿದ್ದರು.ಮನೆಯಲ್ಲಿರುವ ಚಿಕ್ಕಮಕ್ಕಳಿಗೆ ಹುಲಿಭತ್ತ ಹೇರಕುವುದೇ ಕೆಲಸ, ಹುಲಿಭತ್ತ ಹೇರಕಿದ ದುಡ್ಡಲ್ಲಿ ಎಳ್ಳಮವಾಸ್ಯೆ ಜಾತ್ರೆಗೆ ನಡೆದುಕೊಂಡು ಹೋಗುವುದು ಮತ್ತು ವರ್ಷಕ್ಕೊಮ್ಮೆ ಜಾತ್ರೆಯಲ್ಲಿ  talkis ನಲ್ಲಿ ಫಿಲ್ಮ್ ನೋಡಿದರೇನೋ ಖುಷಿ.ಗೌರಿ ಹಬ್ಬದ ಸಮಯದಲ್ಲಿ ಮೀನು ಇಳಿದು ಹೋಗೋ ಸಂದರ್ಭದಲ್ಲಿ ಹಿಡಿದ ಮೀನುಗಳನ್ನ ಬಿಸಿಲುಕಣೆ ಮೇಲೆ ಹಾಕಿ ಒಣಗಿಸಿ ಶೇಕರಿಸಿಟ್ಟುಕೊಳ್ಳೋದು ನಡೀತಿತ್ತು. ಬೇಕಾದಾಗ ಅದನ್ನ ಬಳಸಿಕೊಳ್ಳೋತ್ತಿದ್ದರು ಅದಕ್ಕೆ ಡಿಮ್ಯಾಂಡೋ ಡಿಮ್ಯಾಂಡ್ ನೆರೆಮನೆಯವರೆಲ್ಲ ನಮಗೂ ಸ್ವಲ್ಪ ಕರಿಮೀನು ಕೊಡಿ ಅಂತ ಬಂದು ನಿಂತಿರುತ್ತಿದ್ದರು.ಭತ್ತ ಕುಟ್ಟಿ ಆದ ನಂತರ ಭತ್ತದ ಮೊಳಕೆ ಕಟ್ಟಿ ಮನೆಮನೆಯಲ್ಲೂ  ಹೆಂಡದ ಗಮ್ ಅನ್ನುವ ವಾಸನೆ ಮೂಗಿಗೆ ಬಡಿಯುವುದು ಪ್ರತಿ ಮನೆಯಲ್ಲೂ  ಸಾಮಾನ್ಯವೆ ಸರಿ.ಮದುವೆಮನೆ ಅಥವಾ ಯಾವುದೇ ಸಮಾರಂಭಗಳಲ್ಲಿ ಚೀನಿ ಕಾಯಿಯ ಪಲ್ಯ ಮಾಡಿದರೆ ಹೆಚ್ಚು ಮತ್ತು ನೆಂಟರು ಬಂದಾಗ ಆಲೂಗೆಡ್ಡೆ ಪಲ್ಯ ಮಾಡಿದರೆ ಬಂದ ನೆಂಟರಿಗೆ ಇಂದು ಚಿಕನ್ ಮಟನ್ ಮಾಡಿದಷ್ಟು ಸಂತಸ.ದನ ಮೆಯಿಸೋದು ದನ ಸಂಜೆ ಸಮಯಕ್ಕೆ ಮನೆಗೆ ಹೊಡೆದುಕೊಂಡು ಬರುವಾಗ ಸುಮ್ಮನೆ ಬರುತ್ತಿರಲಿಲ್ಲ ಬೆತ್ತದ ಬುಟ್ಟಿ ಗಳನ್ನ ಮಾಡಿ ದನದ ಜೊತೆ ಮನೆಗೆ ಬರುತ್ತಿದ್ದರು.ಕಡುಬಡತನವಿದ್ದರು ಇತರರ ಮನೆಗೆ ಕೆಲಸಕ್ಕೆ ಹೋಗುವವರು ಕಡಿಮೆಯೇ ಇದ್ದರು ಅವರವ ಮನೆಗೆ ಏನು ಬೇಕೋ ಅದನ್ನ ಬೆಳೆದುಕೊಳ್ಳುವಲ್ಲಿ ಸ್ವಾವಲಂಬನೆ ಹೊಂದಿದ್ದರು .ಆ ಸಮಯದಲ್ಲಿ ದುಡ್ಡಿನ ಅವಶ್ಯಕತೆ  ಬರುತ್ತಿದ್ದದ್ದೇ ಕಡಿಮೆ ಆಗಿರುತ್ತಿತ್ತು.ಎಷ್ಟೋ ದಿನ ಹೊಸಾಳೆ ಯಲ್ಲೆ ಕಾಲ ಕಳೆಯುತ್ತಿದ್ದರು. ಹೊಸಾಳೆ ಅಂದರೆ ಖಾರ ಕಡೆದು ಕೊನೆಯಲ್ಲಿ ಖರಾದ ಕಲ್ಲಿನಲ್ಲಿ ಉಳಿದ ಖರಕ್ಕೆ ಉಪ್ಪು ಹುಳಿ ಸೇರಿಸಿ ಬಳಸುವುದು.
ಅಂಗಡಿಗೆ ಸೋಪು ಶಾಂಪು ಅಂತ ಒಂದಿನ ತೆರಳಿದ್ದು ಸಹ ಇಲ್ಲ ಶೀಗೆ ಕಾಯಿ,ಅಂಟೋಲ ಕಾಯಿಯೇ ಮೈ ಸ್ವಚ್ಛಗೊಳಿಸುವ ಸಾಬೂನುಗಳಾಗಿದ್ದವು.ನಾವಿಂದು ಖರ್ಚು ವೆಚ್ಚಕ್ಕೆ ತಲೆ ಕೆಡಿಸಿಕೊಳ್ಳದೆ ದುಂದು ವೆಚ್ಚ ಮಾಡುತ್ತೇವೆ ಆದರೆ ಹಿಂದಿನವರು ಬಸ್ಸಿನಲ್ಲಿ ಕಂಡಕ್ಟರ್ ಒಂದು ರೂಪಾಯಿ ಚಿಲ್ಲರೆ ಕೊಡದಿದ್ರು  ಜಗಳಕ್ಕೆ ನಿಂತಿರುತ್ತಾರೆ ಕಾರಣ ಇವೆಲ್ಲ ಕಷ್ಟ ಜೀವನದಲ್ಲಿ ಅನುಭವಗಳನ್ನ ಎದುರಿಸಿ ಬಂದಿರುತ್ತಾರೆ.1970 ಯಲ್ಲಿ ಹಣವಿರಲಿಲ್ಲ ಕಾಯಿಲೆ ಇರಲಿಲ್ಲ  ಹಸಿವಿತ್ತು ಆದರೆ ನೆಮ್ಮದಿ ಸಂತೋಷಕ್ಕೆನು ಬರವಿರಲಿಲ್ಲ.

ಜೀವನ್ ಮೃತ್ಯು ! ಕೊರೊನ ನಡುವೆ ಬದುಕು ಹೇಗೆ

ಸ್ನೇಹಿತರೇ, ನಮಗೆ ತಿಳಿದಿರುವ ಹಾಗೇ ಈ ಜಗತ್ತಿನಲ್ಲಿ ನಾವು ಊಹೆಗೂ ನಿಲುಕಿಸದ ಪರಿಸ್ಥಿತಿ ಬಂದೊದಗಿದೆ. ಕಾಲವು ಚಲಿಸುತ್ತಲೇ ಇದೆ ಆದರೆ ಈ ಕಾಲವನ್ನು ಕಣ್ಣಿ...